ಕಡಬ: ರಾಮಕುಂಜ ಗ್ರಾಮದ ಆರಿಂಜ ನಿವಾಸಿ ಜನಾರ್ದನ ಗೌಡ(45)ಎಂಬುವರು ಸೋಫಾದ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಬುಧವಾರ ಮೃತಪಟ್ಟಿದ್ದಾರೆ. ಒಂದೂವರೇ ವರ್ಷದ ಹಿಂದೆಯಷ್ಟೇ ಜನಾರ್ದನ ಗೌಡ ತಮ್ಮ ಕುಟುಂಬದ ಜತೆ ಆಲಂಕಾರಿನ ತಾಯಿ ಮನೆಗೆ ತೆರಳಿ ತಂಗಿದ್ದು, ಬಳಿಕ ಆರಿಂಜದ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಎರಡು ದಿನಗಳ ಹಿಂದೆ ಜರ್ನಾದನ ಗೌಡರಿಗೆ ಅವರ ಅತ್ತಿಗೆ ಕರೆ ಮಾಡಿದ್ದು, ಸ್ವೀಕರಿಸಿರಲಿಲ್ಲ. ಅನುಮಾನಗೊಂಡಿದ್ದ ಸಂಬಂಧಿಕರು ಜನಾರ್ದನ ಗೌಡರ ಮನೆಗೆ ತೆರಳಿದ್ದಾರೆ. ಈ ವೇಳೆ ಮನೆಯ ಒಳಗಿನಿಂದ ಚಿಲಕ ಹಾಕಿದ್ದು, ಕಿಟಕಿಯಿಂದ ಗಮನಿಸಿದಾಗ ಅವರ ದೇಹ ಸೋಫಾದ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು. ಬಾಗಿಲು ಒಡೆದು ಒಳಗೆ ತೆರಳಿ ಪರಿಶೀಲಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಪತ್ನಿ ಜಯಂತಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.