

ಸೋಮವಾರಪೇಟೆ:ಜಲಾಲಿಯಾ ಮಸ್ಜಿದ್ ಕಮಿಟಿ ಮತ್ತು ಮಡಿಕೇರಿಯ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಜಲಾಲಿಯ ಮದರಸ ಹಾಲ್‌ನಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು.
ಶಿಬಿರದಲ್ಲಿ ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕರಿ ಕರುಂಬಯ್ಯ ಮಾತನಾಡಿ, ರಕ್ತದಾನ ಮಹಾದಾನವಾಗಿದೆ. ಹಬ್ಬ ದಿನಗಳಲ್ಲಿ ಸಂಘ ಸಂಸ್ಥೆಗಳು ರಕ್ತದಾನದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡರೆ, ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸಬಹುದಾಗಿದೆ.
ಅಪಘಾತ, ರಕ್ತಹೀನತೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಕೆಲವು ತುರ್ತು ಸಂದರ್ಭ ರಕ್ತದ ಅವಶ್ಯಕತೆ ಇದೆ. ಅಲ್ಲದೆ, ಜಿಲ್ಲೆಯಲ್ಲಿ ಡೆಂಘಿ ಜ್ವರ ಹೆಚ್ಚಳದಿಂದ ಬಿಳಿಯ ರಕ್ತಕಣದ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚಾಗಿ ರಕ್ತದಾನ ಶಿಬಿರಗಳನ್ನು ಮಾಡುವ ಮೂಲಕ ರಕ್ತ ಸಂಗ್ರಹಿಸಬೇಕಿದೆ. ಜಿಲ್ಲಾ ಕೇಂದ್ರದ ರಕ್ತನಿಧಿ ಕೇಂದ್ರಕ್ಕೆ ಬಂದು ರಕ್ತದಾನಕ್ಕೆ ಮುಂದಾಗುವ ದಾನಿಗಳಿಗೆ ಕಷ್ಟವಾಗಲಿದ್ದು, ಇಂತಹ ಶಿಬಿರಗಳನ್ನು ಆಯೋಜಿಸುವುದರಿಂದ, ಸ್ಥಳೀಯವಾಗಿಯೇ ರಕ್ತದಾನ ಮಾಡಲು ಅನುಕೂಲವಾಗುವುದು ಎಂದರು.
ಇಂದಿಗೂ ಯುವ ಜನರು, ಮೂಢನಂಬಿಕೆ, ಭಯ ಮತ್ತು ತಪ್ಪು ಅಭಿಪ್ರಾಯಗಳಿಂದ ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಆರೋಗ್ಯವಂತರು 18 ವರ್ಷದಿಂದ 65 ವರ್ಷದವರೆಗೂ ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆಯ ವೈದ್ಯ ಜಮೀರ್ ಆಹಮ್ಮದ್ ಮಾತನಾಡಿ, ರಕ್ತದಾನದಿಂದ ಜೀವವನ್ನು ಉಳಿಸಬಹುದು ಮತ್ತು ಅನೇಕ ರೋಗಗಳಿಂದ ಬಚಾವಾಗಬಹುದು. ಅದರಂತೆ ನೇತ್ರ ಹಾಗು ಅಂಗಾಂಗಗಳ ದಾನದಿಂದಲೂ ಸಾಕಷ್ಟು ಜೀವ ಉಳಿಸಬಹುದು ಎಂದರು.
ಅಧ್ಯಕ್ಷತೆಯನ್ನು ಜಲಾಲಿಯ ಮಸೀದಿಯ ಅಧ್ಯಕ್ಷ ಎಂ.ಬಿ. ಇಬ್ರಾಹಿಂ ವಹಿಸಿದ್ದರು. ಮಸೀದಿಯ ಧರ್ಮಗುರು ಹಮೀದ್ ಸಖಾಫಿ ಇದ್ದರು. 34 ಜನರು ರಕ್ತದಾನ ಮಾಡಿದರು.