ಕಾರ್ಮಿಕರಿಗಿಲ್ಲ ಸರ್ಕಾರದ ಸವಲತ್ತು : ಸಮಸ್ಯೆ ಪರಿಹಾರಕ್ಕೆ ಆಗ್ರಹ

Published on

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ

ಅರಿಯಡ್ಕ ಗ್ರಾಮದ ಕೌಡಿಚ್ಚಾರಿನ ಸಿಆರ್‌ಸಿ ಕಾಲನಿಯಲ್ಲಿರುವ ರಬ್ಬರ್ ನಿಗಮದ ಕಾರ್ಮಿಕರಿಗೆ ಮತದಾನದ ಹಕ್ಕು ಇದ್ದರೂ, ಅವರು ಸರ್ಕಾರದ ಅನೇಕ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಪ್ರಸ್ತುತ ವಾಸ್ತವ್ಯವಿರುವ ಸ್ಥಳವನ್ನು ಅವರಿಗೆ ಬಿಟ್ಟುಕೊಡಬೇಕು. ಅಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಬರೆದುಕೊಳ್ಳಬೇಕು ಎಂದು ಅರಿಯಡ್ಕ ಗ್ರಾಪಂ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದು, ಈ ಕುರಿತು ನಿರ್ಣಯ ಅಂಗೀಕರಿಸಲಾಯಿತು.

ಅರಿಯಡ್ಕ ಗ್ರಾಪಂ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಿಆರ್‌ಸಿ ಕಾಲನಿಯ ರಬ್ಬರ್ ನಿಗಮದ ಕಾರ್ಮಿಕರ ಸಮಸ್ಯೆ ಕುರಿತು ಸಭೆಯಲ್ಲಿ ಪ್ರಸ್ತಾಪವಾದಾಗ ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ, ಸಿಆರ್‌ಸಿ ಕಾಲನಿ ಕಾರ್ಮಿಕರಿಗೆ ಕೆಲ ಸವಲತ್ತು ನೀಡಲು ತಾಂತ್ರಿಕ ಸಮಸ್ಯೆ ಇದೆ, ಕೆಎಫ್‌ಡಿಸಿ ಇಲಾಖೆಯಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದು, ಕೆಲವರನ್ನು ಕೆಎಫ್‌ಡಿಸಿ ಕೆಲಸದಿಂದ ವಜಾಗೊಳಿಸಿದೆ ಎನ್ನುವ ಉತ್ತರ ಲಭಿಸಿದೆ. ಇಂಥ ಕೆಲವು ಸಮಸ್ಯೆ ಇರುವಾಗ ಅವರಿಗೆ ಮನೆ ನಿವೇಶನಕ್ಕೂ ಸಮಸ್ಯೆಯುಂಟಾಗಿದೆ. ಹಾಗಾಗಿ ಸದ್ಯಕ್ಕೆ ಅವರು ಇರುವ ಅಡಿಸ್ಥಳವನ್ನು ಅವರಿಗೇ ಬಿಟ್ಟುಕೊಡುವ ಬಗ್ಗೆ ಸಂಬಂಧಪಟ್ಟವರಿಗೆ ಬರೆದುಕೊಳ್ಳುವ ಎಂದರು.

ಇದಕ್ಕೆ ಸದಸ್ಯ ಸದಸ್ಯರಾದ ಹರೀಶ್ ರೈ ಜಾರತ್ತಾರು, ರೇಣುಕಾ ಸತೀಶ್ ಧ್ವನಿಗೂಡಿಸಿ, ಸಿಆರ್‌ಸಿ ಕಾಲನಿ ನಿವಾಸಿಗಳ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಸಿಗುವಂತಾಗಬೇಕು ಎಂದರು. ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಾತ್ರವಲ್ಲದೇ ಕೇಂದ್ರ ಸರ್ಕಾರಕ್ಕೂ ಬರೆಯಬೇಕು ಎಂದರು. ಈ ಬಗ್ಗೆ ಚರ್ಚಿಸಿ ಸಭೆಯಲ್ಲಿ ಸರ್ಕಾರಕ್ಕೆ ಬರೆದುಕೊಳ್ಳುವುದೆಂದು ನಿರ್ಣಯ ಕೈಗೊಳ್ಳಲಾಯಿತು.

ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಸದಸ್ಯರಾದ ಸೌಮ್ಯಾ ಬಾಲಸುಬ್ರಹ್ಮಣ್ಯ, ಸಾವಿತ್ರಿ, ನಾರಾಯಣ ನಾಯ್ಕ ಚಾಕೋಟೆ, ಪುಷ್ಪಲತಾ, ವಿನೀತಾ ಕೆ.ವಿ., ರಾಜೇಶ್ ಎಚ್., ಉಷಾರೇಖಾ ರೈ, ಹೇಮಾವತಿ ಚಾಕೋಟೆ, ಅಬ್ದುಲ್ ರಹಿಮಾನ್, ಅನಿತಾ ಆಚಾರಿಮೂಲೆ, ಜಯಂತಿ ಪಿ., ಪ್ರವೀಣ ಉಪಸ್ಥಿತರಿದ್ದು. ಗ್ರಾಪಂ ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ, ವಂದಿಸಿದರು.

ಅರಿಯಡ್ಕ ಗ್ರಾಪಂಗೆ ಸರ್ಕಾರದಿಂದ 8 ಮನೆ ಮಂಜೂರಾಗಿದೆ ಎನ್ನುವ ಮೌಖಿಕ ಮಾಹಿತಿ ಬಂದಿದೆ ಎಂಬ ವಿಚಾರ ಪಿಡಿಒ ಸುನಿಲ್ ಎಚ್.ಟಿ ಸಭೆ ಮುಂದಿಟ್ಟರು. ಗ್ರಾಪಂ ವ್ಯಾಪ್ತಿಗೆ ಬೆರಳೆಣಿಕೆ ಮನೆ ಮಂಜೂರಾಗುವ ಬದಲು ಹೆಚ್ಚು ಮನೆ ಮಂಜೂರು ಮಾಡುವಂತೆ ಸಂಬಂಧಪಟ್ಟವರಿಗೆ ಬರೆದುಕೊಳ್ಳುವಂತೆ ಸದಸ್ಯರು ಆಗ್ರಹಿಸಿದರು. 30-40 ಮನೆಗಳಾದರೂ ನಮ್ಮ ಗ್ರಾಪಂಗೆ ಬೇಕೆಂದು ಬರೆದುಕೊಳ್ಳಬೇಕು ಎಂದು ಅಧ್ಯಕ್ಷ ಸಂತೋಷ್ ಮಣಿಯಾಣಿ ತಿಳಿಸಿದರು. ಇದಕ್ಕೆ ಸದಸ್ಯ ಮೋನಪ್ಪ ಪೂಜಾರಿ ಧ್ವನಿಗೂಡಿಸಿದರು.

ಸದಸ್ಯ ಮೋನಪ್ಪ ಪೂಜಾರಿ ಮಾತನಾಡಿ, ಬಾಳೆಕೊಚ್ಚಿ ಹಾಗೂ ಕಾವು ಹಿದಾಯತ್ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ನೀರಿಲ್ಲದೆ ಸಮಸ್ಯೆ ಉಂಟಾಗಿದ್ದು, ವಾಟರ್‌ಮನ್ ಗೇಟ್‌ವಾಲ್ ಬಂದ್ ಮಾಡಿದ್ದಾರೆ. ಅಲ್ಲಿನ ಈ ಭಾಗದ ನೀರಿನ ಸಮಸ್ಯೆಗೆ ಕೂಡಲೇ ಪರಿಹಾರ ನೀಡಬೇಕೆಂದರು. ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ, ನೀರಿನ ಬಿಲ್ ಸರಿಯಾಗಿ ಸಂಗ್ರಹವಾಗುತ್ತಿಲ್ಲ. ಇದರಿಂದಾಗಿ ಪಂಚಾಯಿತಿಗೆ ಹೊರೆಯಾಗುತ್ತಿದೆ ಎಂದರು. ಸದಸ್ಯ ಲೋಕೇಶ್ ಚಾಕೋಟೆ ನೀರಿನ ವಿಚಾರವಾಗಿ ಮಾತನಾಡಿದರು. ಕೌಡಿಚ್ಚಾರಿನಲ್ಲಿ ದಾರಿದೀಪಗಳು ಉರಿಯದ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ ಅಧ್ಯಕ್ಷ ಸಂತೋಷ್ ಮಣಿಯಾಣಿ, ಮಳೆಗಾಲವಾದ ಕಾರಣ ಈಗ ದುರಸ್ತಿ ಕಾರ್ಯಕ್ಕೆ ತೊಂದರೆಯಾಗಿದೆ ಎಂದು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net