ದೆಹಲಿ ದಂಡಯಾತ್ರೆ ನಂತರ ತಣ್ಣಗಾದ ಸಿಪಿವೈ

hdk--yogeshwar-300x225
Published on

* ರಾಜ್ಯ ಎನ್​ಡಿಎ ಮೈತ್ರಿ ಕೂಟಕ್ಕೆ ತಪ್ಪಿದ ತಲೆನೋವು * ಪಕ್ಷ ನಿರ್ಧಾರಕ್ಕೆ ಬದ್ಧ ಎಂದ ಯೋಗೇಶ್ವರ್​ ಗಂಗಾಧರ್​ ಬೈರಾಪಟ್ಟಣ ರಾಮನಗರ ನನಗೇ ಟಿಕೆಟ್​ ಬೇಕು ಎಂದು ಬಂಡಾಯಕ್ಕೂ ಸಿದ್ಧವಾಗಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​, ದೆಹಲಿ ದಂಡಯಾತ್ರೆ ನಂತರ ತಣ್ಣಗಾಗಿದ್ದಾರೆ. ಎಚ್​.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಎನ್​ಡಿಎ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಪ್ರಬಲವಾದ ಆಕಾಂೆಯನ್ನು ಹೊರಹಾಕಿದ್ದ ಸಿ.ಪಿ.ವೈ., ಈಗ ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ ಎನ್ನುವ ಮೂಲಕ ರಾಜ್ಯ ಎನ್​ಡಿಎ ಮೈತ್ರಿ ಕೂಟದಲ್ಲಿ ಏಳಬಹುದಾಗಿದ್ದ ದೊಡ್ಡ ಬಿರುಗಾಳಿಯನ್ನು ತಪ್ಪಿಸಿದ್ದಾರೆ.

ತಣ್ಣಗಾದ ಬಂಡಾಯ:

ಲೋಕಸಭೆ ಚುನಾವಣೆ ನಂತರ ಹಾಲಿ ವಿಧಾನ ಪರಿಷತ್​ ಸದಸ್ಯರೂ ಆಗಿರುವ ಸಿ.ಪಿ.ಯೋಗೇಶ್ವರ್​ ಉಪಚುನಾವಣೆಯಲ್ಲಿ ನಮಗೇ ಟಿಕೆಟ್​ ಕೊಡಬೇಕೆನ್ನುವ ಪಟ್ಟುಹಾಕಿದ್ದರು. ಆದರೆ, ಇದಕ್ಕೆ ಸ್ಥಳಿಯ ಜೆಡಿಎಸ್​ ಮುಖಂಡರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜಕೀಯವಾಗಿ ತಂತ್ರಗಾರಿಕೆ ಹೆಣೆಯಲು ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಆರಂಭಿಸಿದ್ದರಿಂದ ಸ್ವಾಭಿಮಾನದ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದರು. ಇದರ ಭಾಗವಾಗಿ ಬೃಹತ್​ ಸಮಾವೇಶವನ್ನು ನಡೆಸುವ ಸಿದ್ಧತೆಯೂ ಆರಂಭಗೊಂಡಿತ್ತು. ಆದರೆ ದೆಹಲಿ ನಾಯಕರ ಬುಲಾವ್​ ಹಿನ್ನೆಲೆಯಲ್ಲಿ ಇದು ಅರ್ಧಕ್ಕೆ ಮೊಟಕುಗೊಂಡಿತ್ತು.

ಇಷ್ಟೆಲ್ಲ ಪ್ರಯತ್ನಗಳ ಹೊರತಾಗಿಯೂ ಸಿ.ಪಿ.ಯೋಗೇಶ್ವರ್​ ಬಂಡಾಯ ಏಳಲೂ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಯೂರ್ಟನ್​ ಹೊಡೆಯುವ ಮೂಲ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.

ಟಿಕೆಟ್​ ಭರವಸೆ ಸಿಕ್ಕಿದೆಯೇ?

ಟಿಕೆಟ್​ಗಾಗಿ ಹಲವು ಬಾರಿ ಹೋರಾಟ ಮಾಡಿರುವ ಸಿ.ಪಿ.ಯೋಗೇಶ್ವರ್​ ಪಕ್ಷದಿಂದ ಟಿಕೆಟ್​ ದೊರೆಯದಿದ್ದಾಗ, ಪಕ್ಷೇತರವಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ ಸಾಕಷ್ಟು ಉದಾಹರಣೆಗಳು ಇವೆ. ಈ ಬಾರಿಯೂ ಇಂತಹುದ್ದೇ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಚರ್ಚೆಗಳು ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆಯುತ್ತಲೇ ಇತ್ತು. ಟಿಕೆಟ್​ ಕೊಡುವ ವಿಚಾರದಲ್ಲಿ ಎಚ್​.ಡಿ. ಕುಮಾರಸ್ವಾಮಿ ನಿರ್ಧಾರ ಮಾಡಬೇಕು, ಈಗಲೇ ನಿರ್ಧಾರ ಮಾಡಿದರೆ ಪಕ್ಷ ಸಂಟನೆಗೆ ಅನುಕೂಲವಾಗಲಿದೆ ಎನ್ನುವ ದಾಳವನ್ನು ಉದುರಿಸಿ ಟಿಕೆಟ್​ ದೊರೆಯುವ ಬಗ್ಗೆ ಖಾತ್ರಿ ಮಾಡಿಕೊಳ್ಳುವ ತಂತ್ರಗಾರಿಕೆಯನ್ನು ಯೋಗೇಶ್ವರ್​ ಮಾಡಿದ್ದರು. ಒಂದು ವೇಳೆ ಟಿಕೆಟ್​ ಸಿಗದಿದ್ದರೂ ತಮ್ಮ ಸ್ಪರ್ಧೆ ಖಚಿತ ಎಂದು ಘೋಷಣೆಯನ್ನೂ ಮಾಡಿದ್ದರು. ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಯೋಗೇಶ್ವರ್​ ಅವರ ವರಸೆಯೇ ಬದಲಾಗಿದೆ. ಇದಕ್ಕೆ ಉಪಚುನಾವಣೆಯಲ್ಲಿ ಟಿಕೆಟ್​ ಕೊಡಿಸುವ ಭರವಸೆ ದೊರೆಯಿತೇ ಎನ್ನುವ ಪ್ರಶ್ನೆ ಮೂಡಿಸಿದೆ.

ನಿಖಿಲ್​ ಬಿರುಸು

ಟಿಕೆಟ್​ಗಾಗಿ ಪಕ್ಷದ ದೆಹಲಿ ಕಚೇರಿ ಬಾಗಿಲು ಬಡಿದು ಯೋಗೇಶ್ವರ್​ ಬಂದಿದ್ದಾರೆ. ಆದರೆ, ಜೆಡಿಎಸ್​ ಯುವ ಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸಂಟನೆ ಕಾರ್ಯವನ್ನು ಮುಂದುವರಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್​ ಚನ್ನಪಟ್ಟಣದಲ್ಲಿ ಸಕ್ರಿಯವಾಗುತ್ತಿದ್ದಂತೆ ಎಚ್ಚೆತ್ತ ಎಚ್​ಡಿಕೆ, ಪುತ್ರನಿಗೆ ಕ್ಷೇತ್ರದಲ್ಲಿ ಸಂಟನೆ ಮಾಡಲು ಸೂಚನೆ ನೀಡಿದ್ದರು. ಇದರ ಭಾಗವಾಗಿ ಎನ್​ಡಿಎ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಎನ್ನುತ್ತಲೇ ಪಕ್ಷ ಸಂಟನೆಯಲ್ಲಿ ನಿಖಿಲ್​ ತೊಡಗಿಸಿಕೊಂಡಿದ್ದಾರೆ.

ಕುತೂಹಲ ಮತ್ತಷ್ಟು ಹೆಚ್ಚಳ

ಒಂದೆಡೆ ಯೋಗೇಶ್ವರ್​ ಟಿಕೆಟ್​ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದಿರುವುದು ಮತ್ತೊಂದೆಡೆ ನಿಖಿಲ್​ ಕುಮಾರಸ್ವಾಮಿ ಅವರು ಪಕ್ಷ ಸಂಟನೆಯನ್ನು ಮುಂದುವರಿಸಿರುವುದು ಕ್ಷೇತ್ರದಲ್ಲಿ ಎನ್​ಡಿಎ ಮೈತ್ರಿ ಕೂಟದ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಿಸಿದೆ.

ಎಚ್​.ಡಿ.ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಸಿದ್ದರಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಚರ್ಚೆಗಳು ನಡೆದಿವೆಯಾದರೂ ಎಚ್​.ಡಿ.ಕೆ ನಿರ್ಧಾರವನ್ನು ಬದಲಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಲಭ್ಯ ಮಾಹಿತಿ ಪ್ರಕಾರ ಯೋಗೇಶ್ವರ್​ ಅವರನ್ನೇ ಜೆಡಿಎಸ್​ನಿಂದ ಕಣಕ್ಕೆ ಇಳಿಸಲಾಗುತ್ತದೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿ ಮೂಲಗಳು ಇದನ್ನು ಅಲ್ಲಗಳೆಯುತ್ತಿವೆ. ಹಾಗಾದರೆ ಚನ್ನಪಟ್ಟಣ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

ಪಕ್ಷ ನನ್ನೊಂದಿಗೆ ಇದೆ. ಸೋತಾಗಲೂ ನನಗೆ ಎಂಎಲ್​ಸಿ ಮಾಡಿದೆ. ಟಿಕೆಟ್​ ವಿಚಾರಕ್ಕೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. > ಸಿ.ಪಿ.ಯೋಗೇಶ್ವರ್​, ವಿಧಾನ ಪರಿಷತ್​ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net