ನೀರಾವರಿ ಖ್ಯಾತಿಯ ವೆಂಕಟೇಗೌಡ ಇನ್ನಿಲ್ಲ

cc
Published on

ಚನ್ನಪಟ್ಟಣ: ಚನ್ನಪಟ್ಟಣ ತಾಲೂಕಿನ ಜತೆಗೆ ರಾಮನಗರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅವಿರತ ಶ್ರಮಿಸಿದ ಹೆಗ್ಗಳಿಕೆಯಿರುವ ನೀರಾವರಿ ಖ್ಯಾತಿಯ ನಿವೃತ್ತ ಎಂಜಿನಿಯರ್ ವೆಂಕಟೇಗೌಡ (63) ಕಜಕಿಸ್ತಾನದಲ್ಲಿ ಶುಕ್ರವಾರ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ತಾಲೂಕಿನ ಅಗ್ರಹಾರ ವಳಗೇರಹಳ್ಳಿ (ಎ.ವಿ.ಹಳ್ಳಿ) ಗ್ರಾಮದ ವೆಂಕಟೇಗೌಡರು ಕುಟುಂಬದೊಂದಿಗೆ ಇತ್ತೀಚೆಗೆ ಕಜಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಸಿ ಹಿಂದಿರುವಾಗ ಶುಕ್ರವಾರ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಹೃದಯಾಘಾತವಾಗಿದೆ. ಮೃತರ ಅಂತ್ಯಕ್ರಿಯೆ ನ. 24ರಂದು ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿದೆ.

ಅಪರೂಪದ ಅಧಿಕಾರಿ : ಜಿಲ್ಲೆಯ ನೀರಾವರಿ ಯೋಜನೆಗಳಾದ ವೈ.ಜಿ. ಗುಡ್ಡ, ಮಂಚನಬೆಲೆ, ಕಣ್ವ ಯೋಜನೆಗೆ ನೀಲಿನಕ್ಷೆ ರೂಪಿಸುವ ಜತೆಗೆ, ಸತ್ತೆಗಾಲದಿಂದ ರಾಮನಗರ ಜಿಲ್ಲೆಗೆ ನೀರು ತರುವ ಯೋಜನೆಗೂ ಶ್ರಮಿಸಿದ ಅಪರೂಪದ ಅಧಿಕಾರಿ ಅವರಾಗಿದ್ದರು. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ನೀರಾವರಿ ಯೋಜನೆಗಳಿಗೆ ನೀಲಿನಕ್ಷೆ ರೂಪಿಸುವ ಜತೆಗೆ ಅದರ ಸಾಕಾರಕ್ಕೆ ಶ್ರಮಿಸಿದ್ದ ಕೀರ್ತಿಯೂ ಇವರದಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಆರಂಭಿಸಿದ ವೆಂಕಟೇಗೌಡರು, ನಂತರ ಯು.ಕೆ.ಪಿ ನಾಲಾ1ರ ಮುಖ್ಯ ಎಂಜಿನಿಯರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಅಧೀಕ್ಷಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸತ್ತೆಗಾಲದಿಂದ ರಾಮನಗರ ಜಿಲ್ಲೆಗೆ ನೀರು ತರುವ ಯೋಜನೆಗೆ ಶ್ರಮಿಸಿದ ಕೀರ್ತಿ ಇವರಿಗಿದೆ. ನಿವೃತ್ತಿ ನಂತರವೂ ನೀರಾವರಿ ಯೋಜನೆಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತ ಅವರು ಜನಾನುರಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net