ನ್ಯಾಯಾಂಗದಲ್ಲಿ ವಕೀಲರ ಪಾತ್ರ ಪ್ರಮುಖ

mg
Published on

ಮಾಗಡಿ : ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸುತ್ತಿದ್ದು, ಕಕ್ಷಿದಾರರು ಮತ್ತು ನ್ಯಾಯಾಧೀಶರ ನಡುವೆ ಸೇತುವೆಯಾಗಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪು ಸಿಂಗ್ ಯರೂರು ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನ್ಯಾಯಾಲಯ ಎರಡನೇ ಅಂತಸ್ತಿನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕಕ್ಷಿದಾರರ ಅನುಕೂಲಕ್ಕಾಗಿ ಹಾಗೂ ನ್ಯಾಯದಾನ ವ್ಯವಸ್ಥೆಯನ್ನು ತ್ವರಿತಗೊಳಿಸುವ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ. ಕಕ್ಷಿದಾರರು ವ್ಯಾಜ್ಯಗಳನ್ನು ಶೀಘ್ರವೇ ಇತ್ಯರ್ಥಗೊಳಿಸಿಕೊಳ್ಳಲು ಸಹಕಾರ ನೀಡಬೇಕಿದೆ. ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಕೇಂದ್ರ ಉದ್ಘಾಟಿಸಿದ್ದು, ಈ ಮೂಲಕ ವ್ಯಾಜ್ಯಗಳನ್ನು ಉಚಿತವಾಗಿ ತ್ವರಿತವಾಗಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಸದ್ಬಳಕೆಗೆ ಸಲಹೆ ನೀಡಿದರು.

ನ್ಯಾಯಾಲಯಗಳಲ್ಲಿ ಬೆರಳಚ್ಚು ಯಂತ್ರಗಳ ಮೂಲಕ ಕರ್ತವ್ಯ ನಿರ್ವಹಿಸಲಾಗುತ್ತಿತ್ತು. ತಂತ್ರಜ್ಞಾನ ಮುಂದುವರಿದಂತೆ ಕಂಪ್ಯೂಟರ್ ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತೆಯನ್ನು ಉಪಯೋಗಿಸಿ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಸೌಲಭ್ಯ ಒದಗಿಸಲಾಗುವುದು ಎಂದರು.

ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್.ಎಸ್.ಮಿತ್ತಲಕೋಡ್ ಮಾತನಾಡಿ, ರಾಜ್ಯದಲ್ಲಿ ಯುವ ವಕೀಲರ ನೋಂದಣಿ ಹೆಚ್ಚಾಗಿದ್ದು, ವಕೀಲರು ನ್ಯಾಯದಾನದ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಗೌರವ ನೀಡಿ ಸಹಕಾರ ನೀಡುವುದು ಆದ್ಯಕರ್ತವ್ಯ. ವಕೀಲರು ಶುಲ್ಕಕ್ಕಾಗಿ ವಕೀಲ ವೃತ್ತಿ ಮಾಡದೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ಇತ್ತೀಚೆಗೆ ಹೆಣ್ಣು ಮಕ್ಕಳು ನ್ಯಾಯಾಧೀಶರ ಪರೀಕ್ಷೆ ಬರೆದು ನ್ಯಾಯಾಧೀಶರಾಗಿ ನೇಮಕ ಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ರಾಮನಗರದಲ್ಲಿ ವಕೀಲರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ರಾಜ್ಯದ ಎಲ್ಲ ವಕೀಲರ ಸಂಘ ಹೋರಾಟ ಮಾಡಿ ನ್ಯಾಯ ಒದಗಿಸಲು ಯಶಸ್ವಿಯಾಗಿದ್ದೇವೆ ಎಂದರು.

ಜಿಲ್ಲಾ ನ್ಯಾಯಾಧೀಶೆ ಬಿ.ವಿ.ರೇಣುಕಾ ಮಾತನಾಡಿ, ಮಾಗಡಿ ನ್ಯಾಯಾಲಯದ ಕಟ್ಟಡ ಬಹಳ ವಿಶಾಲವಾಗಿದ್ದು, ಸಾಕಷ್ಟು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳಿದ್ದು, ಈಗ 5 ಮಂದಿ ನ್ಯಾಯಾಧೀಶರು ಕರ್ತವ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಕೀಲರ ಸಂಘದ ಮನವಿಯಂತೆ ಜಿಲ್ಲಾ ನ್ಯಾಯಾಲಯವನ್ನು ಮಂಜೂರು ಮಾಡುವಂತೆ ಈಗಾಗಲೇ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮಾಗಡಿಯಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸುವಂತೆ ತಾಲೂಕು ವಕೀಲರ ಸಂಘ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಧೀಶರಿಗೆ ಮನವಿ ಮಾಡಿದರು.

ಮಾಗಡಿ ತಾಲೂಕಿನಲ್ಲಿ ವಕೀಲ ವೃತ್ತಿಯಿಂದ ನ್ಯಾಯಧೀಶರಾಗಿ ಆಯ್ಕೆಯಾದ ರಾಜೀವ್ ಗೌಡ, ಎಚ್.ಆರ್. ರವಿಕುಮಾರ್, ವಿ.ಎನ್.ಜಗದೀಶ್, ಎಸ್. ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ನ್ಯಾಯಾಧೀಶರಾದ ಸಂದೀಪ್ ಎಸ್ ರೆಡ್ಡಿ, ಆರ್.ಶಿವಕುಮಾರ್, ಕೆ.ಆರ್.ಶ್ರೀನಿವಾಸ್, ಜಿ.ಬಿ. ರಂಜೀತ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀವತ್ಸ, ಮಾಗಡಿ ಅಧ್ಯಕ್ಷ ಆರ್.ಸುರೇಶ್, ಉಪಾಧ್ಯಕ್ಷ ರಾಜಯ್ಯ, ಕಾರ್ಯದರ್ಶಿ ಎಚ್.ಅನಿಲ್ ಕುಮಾರ್, ವಕೀಲರಾದ ಪಾಪಣ್ಣ, ಶ್ರೀನಿವಾಸ್, ನಾರಾಯಣಸ್ವಾಮಿ, ಸಿದ್ದಲಿಂಗಪ್ಪ, ಆರ್.ಮಹೇಶ್, ಚೈತ್ರಾ, ಭಾರತಿ, ಬ್ರಹ್ಮಾನಂದ, ರಾಜಶೇಖರ್, ಧನಂಜಯ, ಪ್ರವೀಣ್ ಕುಮಾರ್ ನರಸಿಂಹಮೂರ್ತಿ, ವಿಕ್ರಮಾದಿತ್ಯ ಇತರರು ಇದ್ದರು.

ವಕೀಲರು ನಿಶ್ವಾರ್ಥ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು. ಅಕ್ರಮ ಮಾರ್ಗದಲ್ಲಿ ವಕೀಲ ವೃತ್ತಿ ಮಾಡುವ ವಕೀಲರು ಎಂದಿಗೂ ಸಮಾಜ ಮುಖಿಯಾಗುವುದಿಲ್ಲ, ವಕೀಲರು ತಮ್ಮ ಕರ್ತವ್ಯ, ನಿಷ್ಠೆ ಪ್ರಮಾಣಿಕತೆಯನ್ನು ನಿರ್ವಹಿಸಿದರೆ ಸಮಾಜ ಸುಧಾರಣೆ ಸಾಧ್ಯ. ವಿವೇಕ್ ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net