

ಬೆಂಗಳೂರು: ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್ (ವಿಮ್ಸ್ ಮತ್ತು ಆರ್ಸಿ), ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಸಹಯೋಗದಲ್ಲಿ ಬೇಸಿಕ್ ಲೈಫ್ ಸಪೋರ್ಟ್(ಬಿಎಲ್ಎಸ್) ಮತ್ತು ಕಾರ್ಡಿಯೋಪಲ್ಮನರಿ ಪುನಶ್ಚೇತನವನ್ನು ಯಶಸ್ವಿಯಾಗಿ ನಡೆಸಿದೆ.
ಬೆಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ‘ಸಿಪಿಆರ್ ತರಬೇತಿ’ ಕಾರ್ಯಕ್ರಮದಲ್ಲಿ ಆರೋಗ್ಯ ವೃತ್ತಿಪರರು ಮತ್ತು ಸಾರ್ವಜನಿಕರನ್ನು ಅಗತ್ಯ ಜೀವ ಉಳಿಸುವ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಕುರಿತು ನೂರಕ್ಕೂ ಅಧಿಕ ಅರ್ಹ ತರಬೇತುದಾರರು 4,300 ಮಂದಿಗೆ ಮಾರ್ಗದರ್ಶನ ನೀಡಿದರು.
ಈ ವೇಳೆ ವಿಮ್ಸ್ ಮತ್ತು ಆರ್ಸಿ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ದಿನಕರ ಪೃಥ್ವಿರಾಜ್ ಮಾತನಾಡಿ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಂಡುಬಂದಾಗ ಪ್ರತಿ ಕ್ಷಣವೂ ಮೌಲ್ಯಯುತವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ತ್ವರಿತವಾಗಿ ಪರಿಣಾಮಕಾರಿ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮ ತುರ್ತು ಸಂದರ್ಭದಲ್ಲಿ ಜೀವನಗಳನ್ನು ಉಳಿಸಲು ನೆರವಾಗಲಿದೆ ಎಂದು ಹೇಳಿದರು.
ಮಕ್ಕಳ ತಜ್ಞ ಡಾ. ಜಿ. ವಿ. ಬಸವರಾಜ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಆರೋಗ್ಯ ವೃತ್ತಿಪರರು, ಸರ್ಕಾರಿ ಏಜೆನ್ಸಿಗಳು ಮತ್ತು ಸಾರ್ವಜನಿಕರೊಂದಿಗೆ ಒಟ್ಟಾಗಿ ಕೆಲಸ ಮಾಡುವ ಮೂಲಕ, ನಾವು ಕರ್ನಾಟಕದಾದ್ಯಂತ ಮಕ್ಕಳಿಂದ ಎಲ್ಲ ವಯೋಮಾನದವರ ಜೀವಗಳನ್ನು ಉಳಿಸುವಲ್ಲಿ ಗಮನಾರ್ಹ ಬದಲಾವಣೆಯನ್ನು ತರುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನವಜಾತ ಶಿಶುಗಳ ತುರ್ತು ಸಂದರ್ಭದವನ್ನು ನಿರ್ವಹಿಸಲು ನೆರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಆಂಬುಲೆನ್ಸ್ ಚಾಲಕರು, ಶಾಲಾ ವಾಹನ ಚಾಲಕರು, ಸಂಚಾರ ಪೊಲೀಸರು, ಶಾಲಾ ಶಿಕ್ಷಕರು, ಪಿಯುಸಿ ವಿದ್ಯಾರ್ಥಿಗಳು, ನರ್ಸಿಂಗ್, ಫಿಸಿಯೋಥೆರಪಿ, ಡೆಂಟಲ್ ಮತ್ತು ಬಿಎಸ್‌ಸಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಸಿಪಿಆರ್ ತರಬೇತಿ ನೀಡಲಾಯಿತು.
ಎನ್‌ಎನ್‌ಎ್ನ ರಾಜ್ಯ ಅಧ್ಯಕ್ಷ ಡಾ. ಪ್ರಶಾಂತ್ ಗೌಡ ಇತರರು ಇದ್ದರು.