

ಮಳವಳ್ಳಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಸಿಪಿಐಎಂ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ಎಲ್.ಭರತ್ ರಾಜ್ ಮಾತನಾಡಿ, ಹತ್ಯೆಗೀಡಾದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜತೆಗೆ ಉಗ್ರರನ್ನ ಮಟ್ಟ ಹಾಕಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಭಯೋತ್ಪಾದಕರಿಗೆ ಮನುಷ್ಯತ್ವ ಇರುವುದಿಲ್ಲ. ಇಂಥ ವಿಕೃತ ಮನಸ್ಥಿತಿಯವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಭಯೋತ್ಪಾದನೆ ನಿರ್ಮೂಲನೆ ಮಾಡುತ್ತೇನೆ ಎಂದು ನರೇಂದ್ರ ಮೋದಿ ಸರ್ಕಾರ ನೋಟ್ ಬ್ಯಾನ್ ಹಾಗೂ 370ನೇ ಕಲಂನ ರದ್ದು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಇಂಥ ಘಟನೆಗಳು ನಡೆದಾಗಲೆಲ್ಲ ಕೇಂದ್ರ ಸರ್ಕಾರ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಆರೋಪಗಳಿಗೆ ಉರುಳಿಲ್ಲವೆಂಬಂತೆ ನರೇಂದ್ರ ಮೋದಿ ಸರ್ಕಾರ ಆಡಳಿತ ನಡೆಸುವ ಮೂಲಕ ಜನರ ಜೀವ ಹಾಗೂ ಜೀವನ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ದೇಶದಲ್ಲಿ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯರೂ ಈ ಘಟನೆಯನ್ನು ಖಂಡಿಸಬೇಕು. ಭಾರತೀಯ ಸಾರ್ವಭೌಮತೆ ಮೇಲೆ, ಭಾರತದ ಶಾಂತಿ ಸೌಹಾರ್ದತೆ ಮೇಲಿನ ದಾಳಿಯಾಗಿದೆ. ಹಾಗಾಗಿ ಎಲ್ಲರೂ ಭಯೋತ್ಪಾದಕರ ಪೈಶಾಚಿಕ ಕೃತ್ಯವನ್ನು ಉಗ್ರವಾಗಿ ಖಂಡಿಸಬೇಕು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿದರು. ಹತ್ಯೆಗೀಡಾದ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಿಪಿಐಎಂ ರಾಜ್ಯ ಸಮಿತಿ ಸದಸ್ಯೆ ದೇವಿ, ಜಿಲ್ಲಾ ಸಮಿತಿ ಸದಸ್ಯರಾದ ಎನ್. ಲಿಂಗರಾಜಮೂರ್ತಿ, ಆನಂದ್, ತಾಲೂಕು ಕಾರ್ಯದರ್ಶಿ ಸುಶೀಲಾ, ಮುಖಂಡರಾದ ಮಹದೇವಮ್ಮ, ಗುರುಸ್ವಾಮಿ, ತಿಮ್ಮೇಗೌಡ, ಶಿವಕುಮಾರ್, ಪ್ರೇಮಾ, ಜಯಶೀಲಾ, ರತ್ನಮ್ಮ, ಶಿವಮಲ್ಲು, ಹನುಮಂತು ಇತರರು ಇದ್ದರು.