ಹೆಣ್ಣೇ ಕೊಡಲ್ಲಾ ಅಂತಾರ್ರಿ... ಏನಾದ್ರೊಂದು ಯೋಜನೆ ತಂದಾದ್ರೂ ನನ್ನಂಥವ್ರಿಗೆ ಮದ್ವೆ ಮಾಡಿಸ್ರಿ ಸಾಹೇಬ್ರೆ...

cpy
Published on

ಮಂಡ್ಯ: ರೈತನನ್ನ ಮದುವೆಯಾಗಲು ಹೆಣ್ಣು ಕೊಡಲು ಒಪ್ಪುತ್ತಿಲ್ಲ. ಬೆಂಗಳೂರಿನಲ್ಲಿ ಇದ್ದೀನಿ ಅಂದ್ರೆ ಹೆಣ್ಣು ಕೊಡ್ತಾರೆ. ಸಿಎಂ ಬಳಿ ಮಾತನಾಡಿ ನಮ್ಮಂತಹವರಿಗಾಗಿ ಒಂದು ಯೋಜನೆ ತನ್ನಿ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಬಳಿ ರೈತನೊಬ್ಬ ಅಳಲು ತೋಡಿಕೊಂಡಿದ್ದಾನೆ.

ಲಾಕ್‌ಡೌನ್ ವೇಳೆ ಹಳ್ಳಿಯೇ ಸರಿ, ರೈತನೇ ಗ್ರೇಟ್ ಎಂದಿದ್ದ ಜನರೀಗ ಮತ್ತೆ ಉಲ್ಟಾ ಹೊಡೆದಿದ್ದಾರೆ. ಕೃಷಿ ಕೆಲಸ ಮಾಡಿಕೊಂಡಿರೋ ಯುವಕರಿಗೆ ಮದುವೆ ಆಗಲು ಹೆಣ್ಣು ಸಿಗ್ತಿಲ್ಲ. ಹೆಣ್ಣು ನೋಡಲು ಹೋದರೆ ಹೆಣ್ಣೆತ್ತವರು ಹಳ್ಳಿಗೆ ಮದುವೆ ಮಾಡಿಕೊಡಲ್ಲ, ಹಳ್ಳಿಗೆ ಹೆಣ್ಣೇ ಕೊಡಲ್ಲಾ ಅಂತ ನೇರವಾಗಿಯೇ ಹೇಳ್ತಾರೆ ಎಂದು. ರೈತನನ್ನ ಮದುವೆಯಾದ್ರೆ ಪ್ರೋತ್ಸಾಹ ಧನ ನೀಡುವ ಯೋಜನೆಯೊಂದನ್ನ ಜಾರಿಗೆ ತನ್ನಿ. ಆಗಲಾದರು ರೈತನಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ ಎಂದು ಸಚಿವರ ಬಳಿ ಮಳವಳ್ಳಿ ಮೂಲದ ರೈತ ಪ್ರವೀಣ್ ಮನವಿ ಮಾಡಿದ್ದಾರೆ.

ರೈತನ ಮನವಿಗೆ ಸ್ಪಂದಿಸಿದ ಯೋಗೇಶ್ವರ್​, ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಚಿವರೊಂದಿಗೆ ರೈತ ಪ್ರವೀಣ್ ಮಾತನಾಡಿರುವ ಆಡಿಯೋ ವೈರಲ್.

ಹಳ್ಳಿಯಲ್ಲಿ ಮನೆ-ತೋಟ-ಗದ್ದೆ ಎಲ್ಲವೂ ಇರ್ಬೇಕು. ಆದರೆ ಕೃಷಿ ಕೆಲಸ ಮಾಡಿಕೊಂಡಿರೋನು ಮಾತ್ರ ಅಳಿಯ ಆಗ್ಬಾರ್ದು. ಅಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರೂ ಪರವಾಗಿಲ್ಲ, ನನ್ನ ಮಗಳು ಸಿಟಿಯಲ್ಲೇ ವಾಸ ಮಾಡಬೇಕು ಎಂಬುದು ಬಹುತೇಕ ಹೆಣ್ಮಕ್ಕಳ ಪಾಲಕರ ಡಿಮಾಂಡ್​. ಕರೊನಾ ಲಾಕ್​ಡೌನ್​ ವೇಳೆ ಈ ಡಿಮಾಂಡ್​ನಿಂದ ಸ್ವಲ್ಪ ಹಿಂದೆ ಸರಿದಿದ್ದ ಜನರ ಪೈಕಿ ಹಲವರಲ್ಲಿ ಮತ್ತೆ ಸಿಟಿ ವ್ಯಾಮೋಹ ಚಿಗುರೊಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net