

ಹನೂರು: ಪಟ್ಟಣ ಸಮೀಪದ ಆರ್.ಎಸ್. ದೊಡ್ಡಿಯ ಹೊರವಲಯದಲ್ಲಿ ಗುರುವಾರ ಸಂಜೆ ಕಿಡಿಗೇಡಿಗಳು ಅಡಗಿಸಿಟ್ಟಿದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರಗೊಂಡಿದೆ.
ಆರ್.ಎಸ್. ದೊಡ್ಡಿಯ ನಾಗಣ್ಣ ಹೊರವಲಯದ ಮಾಳದಲ್ಲಿ ಹಸುವನ್ನು ಮೇಯಲು ಬಿಟ್ಟಿದ್ದರು. ಆದರೆ ಕಿಡಿಗೇಡಿಗಳು ಕಾಡುಹಂದಿ ಬೇಟೆಯಾಡುವ ಉದ್ದೇಶದಿಂದ ಅಲ್ಲಲ್ಲಿ ಸಿಡಿಮದ್ದನ್ನು ಅಡಗಿಸಿ ಇಟ್ಟಿದ್ದರು ಎನ್ನಲಾಗಿದೆ. ಆದರೆ ಹಸು ಮೇಯುತ್ತಿದ್ದ ವೇಳೆ ಸಿಡಿಮದ್ದಿಗೆ ಬಾಯಿ ಹಾಕಿದಾಗ ಸ್ಫೋಟಗೊಂಡ ಪರಿಣಾಮ ಬಾಯಿ ಛಿದ್ರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಈ ಸಂಬಂಧ ನಾಗಣ್ಣ ಅವರು ಶುಕ್ರವಾರ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.