ಸಿನಿಮೀಯ ರೀತಿಯಲ್ಲಿ ಗೋರಕ್ಷಣೆ; 1 ಕಿ.ಮೀ. ದೂರ ಕಾರಲ್ಲಿ ರಿವರ್ಸ್ ಹೋಗಿ ಪರಾರಿಯಾದ ದನಗಳ್ಳರು!

Feature
Published on

ಶಿವಮೊಗ್ಗ: ಇಲ್ಲಿ ದನಗಳ್ಳರನ್ನು ಗೋಪ್ರೇಮಿಗಳು ಅಕ್ಷರಶಃ ಹಿಮ್ಮೆಟ್ಟಿಸಿದ್ದಾರೆ. ಅರ್ಥಾತ್​, ದನಗಳನ್ನು ಕದ್ದೊಯ್ಯಲು ಬಂದ ಕಳ್ಳರು ಕಾರನ್ನು ತಿರುಗಿಸಲೂ ಆಗದೆ ರಿವರ್ಸ್​ ಗೇರ್​ನಲ್ಲೇ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾರೆ. ಈ ದೃಶ್ಯದ ವಿಡಿಯೋ ತುಣುಕು ಇದೀಗ ವೈರಲ್​ ಆಗಿದ್ದು, ದನಗಳ್ಳರ ಪರಾರಿ ವಿಷಯ ಬೆಳಕಿಗೆ ಬಂದಿದೆ.

ಶಿವಮೊಗ್ಗದ ತೀರ್ಥಹಳ್ಳಿಯ ಕೊಪ್ಪ ಸರ್ಕಲ್​ನಲ್ಲಿ ರಾತ್ರಿ ದನಗಳನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ಅದೇ ಸಮಯಕ್ಕೆ ಆ ದಾರಿಯಲ್ಲಿ ಸಾಗುತ್ತಿದ್ದ ಸುದೀಪ್ ಶೆಟ್ಟಿ ಹಾಗೂ ಜಾವೀದ್ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾರನ್ನು ತಿರುಗಿಸಲು ಆಗದ್ದರಿಂದ ಹಸುಗಳನ್ನು ಅಲ್ಲೇ ಬಿಟ್ಟ ದನಗಳ್ಳರು ರಿವರ್ಸ್​ ಗೇರ್​ನಲ್ಲೇ ಚಲಾಯಿಸಿಕೊಂಡು ಹಿಂದಕ್ಕೆ ಹೋಗಿದ್ದಾರೆ. ಆದರೂ ಬಿಡದ ಸುದೀಪ್​-ಜಾವೀದ್​ ಅವರನ್ನು ಚೇಸ್​ ಮಾಡಿದ್ದಾರೆ.

ಹೀಗೆ ಸುಮಾರು ಒಂದು ಕಿಲೋಮೀಟರ್​ನಷ್ಟು ದೂರ ರಿವರ್ಸ್​ನಲ್ಲೇ ಹೋದ ದನಗಳ್ಳರು, ಕೊನೆಗೆ ಸುದೀಪ್​-ಜಾವೀದ್ ಇದ್ದ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಅಂದಹಾಗೆ ಈ ಘಟನೆ ಮೊನ್ನೆ ರಾತ್ರಿ ನಡೆದಿದ್ದು, ಅದರ ವಿಡಿಯೋ ತುಣುಕು ವೈರಲ್​ ಆಗಿ ಪ್ರಕರಣ ಇದೀಗ ಎಲ್ಲರ ಗಮನ ಸೆಳೆಯಲಾರಂಭಿಸಿದೆ.

ತೀರ್ಥಹಳ್ಳಿ ಪಟ್ಟಣದಲ್ಲಿ ದನಗಳನ್ನು ಕಳ್ಳತನ ಮಾಡುವಾಗ ಕಳ್ಳರ ಕಾರನ್ನು ಅಡ್ಡಗಟ್ಟಿದ ಯುವಕರು. ಇನ್ನು ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಮಲೆನಾಡಿನಲ್ಲಿ ದನಗಳವು ಪ್ರಕರಣ ಹೆಚ್ಚಾಗುತ್ತಿದ್ದು, ರಾತ್ರಿ ದನಗಳನ್ನು ಕದ್ದು ಕಾರಿನಲ್ಲಿ ತುಂಬಿಸಿಕೊಂಡು ಹೋಗುವವರ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net