

ಭಟ್ಕಳ: ಒಂದೆಡೆ ಕರೊನಾ ಲಾಕ್ಡೌನ್, ಇನ್ನೊಂದೆಡೆ ಗೋ ಕಳ್ಳರ ಹಾವಳಿ. ಲಾಕ್ಡೌನ್ ಲಾಭ ಪಡೆಯುತ್ತಿರುವ ಕಳ್ಳರು ಪ್ರತಿದಿನ ತಾಲೂಕಿನ ಒಂದೊಂದು ಕಡೆಯಿಂದ ಜಾನುವಾರುಗಳನ್ನು ಕಳವು ಮಾಡುತ್ತಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಹನುಮಾನ್ನಗರದಲ್ಲಿ ಈಗಾಗಲೇ 10ಕ್ಕೂ ಅಧಿಕ ಜಾನುವಾರುಗಳು ಮಾಯವಾಗಿವೆ. ಜಾಲಿಯಲ್ಲೂ ಇದೇ ವರಸೆ ಮುಂದುವರಿದಿದೆ. ಬೆಳಕೆಯಲ್ಲಿ ಶನಿವಾರ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದು ಹಾಡುವಳ್ಳಿ ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದು ಕಳ್ಳರು ಪರಾರಿಯಾಗಿದ್ದರು. ಗಾಡಿಯಲ್ಲಿ 1 ಎಮ್ಮೆ, 2 ಎಮ್ಮೆ ಕರುಗಳು ಸಿಕ್ಕಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಭಟ್ಕಳದಲ್ಲಿ ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಿದ್ದರೂ ಕೊಟ್ಟಿಗೆಯಲ್ಲಿನ ದನಗಳು ಮಾಯವಾಗುತ್ತಿರುವುದಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ಇಲ್ಲವಾದರೂ ಅವ್ಯಾಹತವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಹೊರಗಿನಿಂದ ಯಾವುದೇ ಗೋವುಗಳು ಭಟ್ಕಳಕ್ಕೆ ಬರುತ್ತಿಲ್ಲವಾದ್ದರಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ಜಾನುವಾರುಗಳನ್ನು ಕದ್ದು ಮಾರುಕಟ್ಟೆಗೆ ಒದಗಿಸಲಾಗುತ್ತದೆ. ರಾತ್ರೋರಾತ್ರಿ ಕಳ್ಳರು ಕೈಚಳಕ ನಡೆಸಿ ಕದ್ದ ಜಾನುವಾರುಗಳು ಬೆಳಗಾಗುವಷ್ಟರಲ್ಲಿ ಮಾಂಸದ ಮುದ್ದೆಯಾಗುತ್ತಿವೆ. ಭಟ್ಕಳದಲ್ಲಿ ಲಾಕ್ಡೌನ್ ಇದ್ದ ಪರಿಣಾಮ ಜನ ದೂರು ಸಲ್ಲಿಸಲು ಹಿಂದೇಟು ಹಾಕುತ್ತಿರುವುದು ಒಂದೆಡೆಯಾದರೆ, ಹಳ್ಳಿಗಳಿಂದ ಬಂದು ದೂರು ನೀಡಲು ವಾಹನಗಳ ವ್ಯವಸ್ಥೆ ಇಲ್ಲದಿರುವುದು ಇನ್ನೊಂದು ಕಾರಣವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ಜಾನುವಾರುಗಳನ್ನು ಕದಿಯುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಶಿರಾಲಿ, ಗೊರ್ಟೆ, ಭಟ್ಕಳ ಪಟ್ಟಣ ಸೇರಿ ಒಟ್ಟು ನಾಲ್ಕು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
‘ರಾತ್ರಿ ಪೊಲೀಸರು ತಪಾಸಣೆ ಚುರುಕುಗೊಳಿಸಬೇಕು. ತಾಲೂಕಾಡಳಿತ ಈ ಕುರಿತು ಗಮನಹರಿಸಲಿ’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಆಗ್ರಹಿಸಿದ್ದಾರೆ.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಪಾಸಣೆಯನ್ನು ಮತ್ತಷ್ಟು ಚುರುಕು ಗೊಳಿಸಲಾಗುವುದು. ಸುಮ್ಮನೆ ಓಡಾಡುವವರ ಕುರಿಉ ಪರಿಶೀಲನೆ ನಡೆಸಲಾಗುವುದು. | ಗೌತಮ ಕೆ.ಸಿ., ಡಿವೈಎಸ್ಪಿ https://www.vijayavani.net/politician-locks-people-in-haunted-house-for-breaking-quarantine-rules/ https://www.vijayavani.net/ex-cm-kumarasawmy-urges-govt-to-reduce-cost-of-living/