

ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಆನಗಳಲೆ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಗರ್ಭ ಧರಿಸಿದ ಹಸು ಸಾವಿಗೀಡಾಗಿದೆ.
ಚಿನ್ನಹಳ್ಳಿ ಗ್ರಾಮದ ರೈತ ನಜೀರ್ ಅವರ ಹಸು ಸಿಡಿಲಿಗೆ ಬಲಿಯಾಗಿದೆ. ಎಂದಿನಂತೆ ಆನಗಳಲೆ ಗ್ರಾಮದ ಸಮೀಪದಲ್ಲಿರುವ ತಮ್ಮ ಜಮೀನಿನಲ್ಲಿ ಮೇವು ತಿನ್ನಲು ಹಸುಗಳನ್ನು ಕಟ್ಟಿದ್ದರು. ಗುರುವಾರ ಸಂಜೆ 4.30ಕ್ಕೆ ಜೋರಾಗಿ ಶುರುವಾದ ಗಾಳಿ, ಮಳೆ ನಂತರ ಸಿಡಿಲು ಮಿಂಚು ಸಹಿತ ಸುರಿದಿದೆ. ಮಳೆ ಪ್ರಾರಂಭವಾಗಿದ ಕೂಡಲೇ ನಜೀರ್ ಹಸುಗಳನ್ನು ಮನೆಗೆ ಹೊಡೆದುಕೊಂಡು ಹೋಗಲು ಮುಂದಾದಾಗ ಗರ್ಭಿಣಿ ಹಸುಗೆ ಸಿಡಿಲು ಬಡಿದಿದೆ. ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸಬೇಕೆಂದು ಸಂತ್ರಸ್ತ ನಜೀರ್ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.