ಕರೊನಾ ಕಾರಣ ಹುಟ್ಟುಹಬ್ಬ, ಕಿಟ್ಟಿ ಪಾರ್ಟಿಗೆ ಬ್ರೇಕ್

corona new
Published on

ಬೆಂಗಳೂರು: ಕರೊನಾ ಸೋಂಕಿತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಸಡಿಲಿಕೆ ನಂತರವೂ ಹುಟ್ಟುಹಬ್ಬ, ಕಿಟ್ಟಿ ಪಾರ್ಟಿ ಸೇರಿ ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಸಂಬಂಧ ಕೆಲ ಮಾರ್ಗಸೂಚಿಗಳನ್ನು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಬಿಡುಗಡೆ ಮಾಡಿದ್ದಾರೆ.

ಆರೋಗ್ಯದ ಬಗ್ಗೆ ಎಚ್ಚರಿಕೆ ನೆರೆಹೊರೆಯವರ ಆರೋಗ್ಯ ಸ್ಥಿತಿಗತಿ ಬಗ್ಗೆ ನಿಗಾ ವಹಿಸಿ, ತಮ್ಮ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಹೊರದೇಶ, ಹೊರ ರಾಜ್ಯಗಳ ಪ್ರಯಾಣ ಹಿನ್ನೆಲೆ ಹೊಂದಿದ್ದಲ್ಲಿ 14 ದಿನಗಳ ಹೋಂ ಕ್ವಾರಂಟೈನ್​ಗೆ ಒಳಗಾಗಬೇಕು ಹಾಗೂ ಪ್ರಯಾಣ ಹಿನ್ನೆಲೆ ಕುರಿತು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಕ್ಕಳು, ವೃದ್ಧರು ಸೇರಿ ಅನಾರೋಗ್ಯ ಪೀಡಿತರು ಮನೆಯಿಂದ ಹೊರಹೋಗದಂತೆ ನೋಡಿಕೊಳ್ಳಬೇಕು. ರೋಗ ಲಕ್ಷಣ ಕಾಣಿಸಿಕೊಂಡಲ್ಲಿ ಸ್ವಯಂ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯ ಜತೆಗೆ ಆಪ್ತಮಿತ್ರ ಸಹಾಯವಾಣಿ ಸಂಖ್ಯೆ: 14410 ಡೌನ್​ಲೋಡ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಅತಿಥಿಗಳು ಸೇರಿ ಯಾವುದೇ ಹೊರಗಿನ ವ್ಯಕ್ತಿ ಆಗಮಿಸಿದಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಶೀತ, ಜ್ವರ, ಕೆಮ್ಮು ಸೇರಿ ರೋಗ ಲಕ್ಷಣ ಹೊಂದಿದ್ದಲ್ಲಿ ಆರೋಗ್ಯ ತಪಾಸಣೆಗಾಗಿ ಹತ್ತಿರದ ಫೀವರ್ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಕಳುಹಿಸಬೇಕು. ಹೊರಗಿನ ವ್ಯಕ್ತಿಗಳೊಂದಿಗೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಗಾ ವಹಿಸಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಮನೆಯಿಂದ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಲಾಗಿದೆ.

ಕಟ್ಟಡಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಕೈಗಳ ಸ್ವಚ್ಚತೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಲಿಫ್ಟ್, ಉದ್ಯಾನವನ, ನಡಿಗೆ ಪಥ ಸೇರಿ ಸಾಮಾನ್ಯ ಸ್ಥಳಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲೆಡೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಚಗೊಳಿಸಬೇಕು. ಜಿಮ್ ಮತ್ತು ಈಜುಕೊಳ ಬಳಸಬಾರದು. ಹೋಂ ಕ್ವಾರಂಟೈನ್​ಗೆ ಒಳಗಾದವರು ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘಗಳು ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ 500 ಗಡಿ ದಾಟಿದ ಕರೊನಾ

ರಾಜಧಾನಿಯಲ್ಲಿ ಕರೊನಾ ಒಟ್ಟು ಸೋಂಕಿತರು 522 ಗುಣಮುಖರಾದವರು 298 ಸಕ್ರಿಯ ಪ್ರಕರಣ 204 ಮೃತಪಟ್ಟವರು 19 ಕ್ವಾರಂಟೈನ್​ನಲ್ಲಿರುವವರು 1343 ಕಂಟೇನ್ಮೆಂಟ್ ಪ್ರದೇಶ 64

ಉದ್ಯಾನನಗರಿಯಲ್ಲಿ ಮಂಗಳವಾರ 29 ಜನರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದ್ದು, ಒಬ್ಬ ಸೋಂಕಿತ ಮೃತಪಟ್ಟಿದ್ದಾನೆ. ಈ 29 ಸೋಂಕಿತರಲ್ಲಿ 20 ಜನರು ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರಾಗಿ ದ್ದಾರೆ. ಕುವೈತ್​ನಿಂದ ಬಂದ ಒಂದೇ ಕುಟುಂಬದ ಮೂವರು, ತಮಿಳುನಾಡಿನಿಂದ ಬಂದ ಒಬ್ಬ ವ್ಯಕ್ತಿ ಹಾಗೂ ಅನಾರೋಗ್ಯ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಉಳಿದ ಮೂವರಿಗೆ ಯಾವ ಮೂಲದಿಂದ ಸೋಂಕು ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ವಿಶ್ವೇಶ್ವರಪುರದಲ್ಲಿ ಸೋಂಕಿನಿಂದ ಮೃತಪಟ್ಟ ಮಹಿಳೆ ಸಂಪರ್ಕದಲ್ಲಿದ್ದ 14 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಸೋಮವಾರ 7 ಹಾಗೂ ಮಂಗಳವಾರ 6 ಜನರಿಗೆ ಸೋಂಕು ದೃಢಪಟ್ಟಿದೆ.

ನಿಮ್ಹಾನ್ಸ್​ನಲ್ಲಿ ಸಿಬ್ಬಂದಿಗೆ ಸೋಂಕು: ನಿಮ್ಹಾನ್ಸ್​ನಲ್ಲಿ ಆರೋಗ್ಯ ಸಿಬ್ಬಂದಿಯಾಗಿರುವ 34 ವರ್ಷದ ಮಹಿಳೆ ಹಾಗೂ ಆನಂದರಾವ್ ಪೊಲೀಸ್ ಕ್ವಾರ್ಟರ್ಸ್ ನಲ್ಲಿದ್ದ ಪೇದೆಗೆ ಸೋಂಕು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಅವರನ್ನು ನಿಗದಿತ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಕಂಟೇನ್ಮೆಂಟ್ ಸಂಖ್ಯೆ 64ಕ್ಕೆ ಏರಿಕೆ: ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಒಂದೊಂದು ವಾರ್ಡ್​ನಲ್ಲಿ ಎರಡರಿಂದ ಮೂರು ಪ್ರದೇಶಗಳಲ್ಲಿ ಕಂಟೇನ್ಮೆಂಟ್ ವಿಧಿಸಲಾಗುತ್ತಿದೆ. 52 ವಾರ್ಡ್ ಗಳಲ್ಲಿ 64 ಪ್ರದೇಶಗಳನ್ನು ಕಂಟೇನ್ಮೆಂಟ್ ಎಂದು ಗುರುತಿಸಲಾಗಿದೆ. 11 ಅಪಾರ್ಟ್​ವೆುಂಟ್, 1 ಹೋಟೆಲ್ ಹಾಗೂ 2 ಕೊಳೆಗೇರಿಯೂ ಕಂಟೇನ್ಮೆಂಟ್ ಪಟ್ಟಿಯಲ್ಲಿವೆ. ಹತ್ತಕ್ಕಿಂತ ಹೆಚ್ಚು ಸೋಂಕಿತರ ಸಂಪರ್ಕ ಹೊಂದಿದ್ದ ಕಾರಣ 1 ಪ್ರದೇಶದಲ್ಲಿ ಕಂಟೇನ್ಮೆಂಟ್ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net