

ಬೆಂಗಳೂರು: ಕಮಾಂಡ್ ಆಸ್ಪತ್ರೆ ವೈದ್ಯರು, ಯಶವಂತಪುರದ ತರಕಾರಿ ಮಂಡಿ ಸಿಬ್ಬಂದಿ ಸೇರಿ 12 ಹೊಸ ಸೋಂಕಿತರು ಬೆಂಗಳೂರಿನಲ್ಲಿ ಶುಕ್ರವಾರ ಪತ್ತೆಯಾಗುವ ಮೂಲಕ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 303ಕ್ಕೇರಿದೆ.
ಶುಕ್ರವಾರ ಪತ್ತೆಯಾದ ಸೋಂಕಿತರಲ್ಲಿ ಆಂಧ್ರಪ್ರದೇಶ, ತಮಿಳುನಾಡಿನಿಂದ ತಲಾ ಒಬ್ಬರು, ದೆಹಲಿಯಿಂದ ಬಂದ ಮೂವರಿದ್ದಾರೆ. ಆದರೆ ಉಳಿದ 7 ಸೋಂಕಿತರಿಗೆ ಯಾವುದೇ ಪ್ರಯಾಣ ಇತಿಹಾಸವಿಲ್ಲ. ನಗರದಲ್ಲಿ ಈವರೆಗೆ 151 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 141 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಶಾಂತಿ-ಸಹಬಾಳ್ವೆಯ ನಿರೂಪಕ, ನಿರ್ಮಾಪಕ
ಚಿಕ್ಕಬಳ್ಳಾಪುರದ ಸೋಂಕಿತ ಸಾವು ಮೇ 25ರಂದು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಚಿಕ್ಕಬಳ್ಳಾಪುರದ ವೃದ್ಧರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಅಪಘಾತದಿಂದ ಗಾಯಗೊಂಡಿದ್ದವರಿಗೆ ಕೆಲ ದಿನಗಳಿಂದಲೇ ನ್ಯುಮೋನಿಯಾ ಸೇರಿ ಉಸಿರಾಟದ ತೊಂದರೆಯೂ ಇತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತಂದಾಗ ನಡೆಸಿದ ಕರೊನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವೈದ್ಯರಿಗೆ ಸೋಂಕು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿಗದಿ ಪಡಿಸಲಾಗಿರುವ ಹಳೇ ವಿಮಾನ ನಿಲ್ದಾಣ ರಸ್ತೆಯ ಕಮಾಂಡ್ ಆಸ್ಪತ್ರೆಯ ಐವರಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಇಬ್ಬರು ವೈದ್ಯರು ಹಾಗೂ ಉಳಿದವರು ವೈದ್ಯಕೀಯ ಸಿಬ್ಬಂದಿ. ಈ ಪೈಕಿ ಮೂವರು ಸೋಂಕಿತರ ನಿವಾಸ ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಈ ಪ್ರದೇಶ ಸೀಲ್ಡೌನ್ ಮಾಡಿಕೊಳ್ಳುವುದಾಗಿ ರಕ್ಷಣಾ ಇಲಾಖೆ ಅಧಿಕಾರಿಗಳೇ ತಿಳಿಸಿದ್ದಾರೆ. ನವದೆಹಲಿಯಿಂದ ಆಗಮಿಸಿದ 3 ವರ್ಷದ ಮಗು ಹಾಗೂ ತಾಯಿಗೆ ಕರೊನಾ ಸೋಂಕು ದೃಢಪಟ್ಟಿದೆ.
ತರಕಾರಿ ಮಂಡಿ ನೌಕರನಿಗೆ ದೃಢ: ಯಶವಂತಪುರ ಮೂಲದ 48 ವರ್ಷದ ಸೋಂಕಿತನಿಗೆ ಸೋಂಕು ಕಾಣಿಸಿಕೊಂಡಿದೆ. ಸಿಂಗೇನ ಆಗ್ರಹಾರದ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿನಿತ್ಯ ಸಿಂಗೇನ ಆಗ್ರಹಾರಕ್ಕೆ ತೆರಳಿ ಯಶವಂತಪುರಕ್ಕೆ ವಾಪಸಾಗುತ್ತಿದ್ದರು. ಸೋಂಕಿತರ ಪತ್ನಿ ಹಾಗೂ ಮಗನನ್ನು ಪ್ರಾಥಮಿಕ ಸಂರ್ಪತರು ಎಂದು ಪರಿಗಣಿಸಿ ಕ್ವಾರಂಟೈನ್ ಮಾಡಲಾಗಿದೆ. 19 ಮಂದಿ ದ್ವಿತೀಯ ಸಂರ್ಪತರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ ಎಂದು ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಮಾಹಿತಿ ನೀಡಿದ್ದಾರೆ.