ಅಂಗವಿಕಲರಿಗೆ ಕೋವಿಡ್ ಲಸಿಕೆ ನಾಳೆಯಿಂದ

5-hvr-03
Published on

ಹಾವೇರಿ: ಜಿಲ್ಲೆಯಲ್ಲಿರುವ ಅಂಗವಿಕಲರು, ಬುದ್ಧಿಮಾಂದ್ಯರು ಹಾಗೂ ಹಿರಿಯ ನಾಗರಿಕರಿಗೆ ಸೋಮವಾರದಿಂದ ಗ್ರಾಪಂವಾರು ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಅಂಗವಿಕರಿಗೆ ಲಸಿಕೆ ಕಾರ್ಯಕ್ರಮ ಕುರಿತು ತಾಲೂಕು ಅಧಿಕಾರಿಗಳೊಂದಿಗೆ ಶನಿವಾರ ವಿಡಿಯೋ ಸಂವಾದ ನಡೆಸಿದ ಅವರು, ಗ್ರಾಪಂವಾರು ಅಂಗವಿಕಲರಿಗೆ ಕೋವಿಡ್ ಲಸಿಕೆ ಹಾಕುವ ಕುರಿತು ಮೈಕ್ರೋಪ್ಲಾನ್ ಸಿದ್ಧಪಡಿಸಿಕೊಳ್ಳಬೇಕು. ಆಯಾ ಆರೋಗ್ಯ ಕೇಂದ್ರಗಳ ವ್ಯಾಪ್ತಿಗೆ ಬರುವ ಗ್ರಾಪಂಗಳ ಹಳ್ಳಿಗಳ ಅಂಗವಿಕಲರಿಗೆ ಕೋವಿಡ್ ಲಸಿಕೆ ಹಾಕುವುದು ಮೆಡಿಕಲ್ ಆಫೀಸರ್ ಕರ್ತವ್ಯವಾಗಿದೆ. ಲಸಿಕೆಗೆ ಅಗತ್ಯವಾದ ಜಾಗವನ್ನು ಗುರುತಿಸಿ ಕುಡಿಯುವ ನೀರು, ನೆರಳು, ಮೂಲ ಸೌಕರ್ಯಗಳನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

18 ವರ್ಷ ಮೇಲ್ಪಟ್ಟ 44 ವರ್ಷದವರೆಗೆ ಹಾಗೂ 44 ವರ್ಷ ಮೇಲ್ಪಟ್ಟ ಅಂಗವಿಕಲರಿಗೆ ಲಸಿಕೆ ಹಾಕಲಾಗುವುದು. ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರಿಗೆ ಹಾಗೂ 90 ವರ್ಷ ಮೇಲ್ಪಟ್ಟ ಹಿರಿಯರಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಪಡೆಯಲು ಬರುವವರಿಗೆ ಗ್ರಾಪಂನಿಂದ ವಾಹನ ವ್ಯವಸ್ಥೆ ಮಾಡಬೇಕು ಎಂದರು.

ಜಿಪಂ ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ಅಂಗವಿಕಲರಿಗೆ ಒಂದು ಪಾಯಿಂಟ್​ನಲ್ಲಿ ಕನಿಷ್ಠ ನೂರು ಜನರಿಗೆ ಲಸಿಕೆ ಹಾಕಬೇಕು. ವೃದ್ಧಾಶ್ರಮಗಳಿದ್ದರೆ ಅಲ್ಲಿ ವಾಸ ಮಾಡುವ ಹಿರಿಯ ನಾಗರಿಕರಿಗೂ ಲಸಿಕೆ ಹಾಕಲು ಕ್ರಮವಹಿಸಬೇಕು. ನಾಲ್ಕು ದಿನದೊಳಗಾಗಿ ಜಿಲ್ಲೆಯ ಎಲ್ಲ ಅಂಗವಿಕಲರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದರು.

ಜಿಲ್ಲೆಯ 781 ಗ್ರಾಮಗಳಲ್ಲಿ 885 ಮಾನಸಿಕ ಅಸ್ವಸ್ಥರು, 2,450 ಬುದ್ಧಿಮಾಂದ್ಯರು, 4,533 ದೃಷ್ಟಿದೋಷವುಳ್ಳವರು, 6,855 ಶ್ರವಣದೋಷವುಳ್ಳವರು, 20,735 ದೈಹಿಕ ಅಂಗವಿಕಲರು, 1,826 ಬಹು ವಿವಿಧ ಅಂಗವಿಕಲರು ಒಳಗೊಂಡಂತೆ 37,284 ಜನ ಅಂಗವಿಕಲರಿದ್ದಾರೆ. ಇದರಲ್ಲಿ 1,574 ಜನ ವ್ಯಾಕ್ಸಿನ್ ಪಡೆದಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ, ಅಂಗವಿಕಲರಿಗೆ ಕೋವಿಡ್ ಲಸಿಕೆ ಕುರಿತು ಮಾಹಿತಿ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net