ವಿವಿ ಆವರಣ ಪ್ರವೇಶಿಸ್ತೀರಾ... ಕರೊನಾ ಪರೀಕ್ಷೆ ಕಡ್ಡಾಯ!

Tumkur University
Published on

ತುಮಕೂರು: ಪದವಿ, ಸ್ನಾತಕಪದವಿ ಕಾಲೇಜು ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ವಿವಿ ಆವರಣಕ್ಕೆ ಪ್ರವೇಶಿಸಲು ಬಯಸುವವರಿಗೆ ಕರೊನಾ ಪರೀಕ್ಷೆ ಕಡ್ಡಾಯ !

ನ.17ರಿಂದ ಕಾಲೇಜು ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಸಿರುವ ತುಮಕೂರು ವಿವಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಗೆ ಶೈಕ್ಷಣಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವಿವಿ ಆವರಣ ಪ್ರವೇಶಿಸುವರ ಬಳಿ ಕರೊನಾ ನೆಗೆಟಿವ್ ಸರ್ಟಿಫಿಕೇಟ್ ತೋರಿಸಬೇಕು. ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ನಾತಕೋತ್ತರ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾಗಿದೆ. ತರಗತಿಗಳಿಗೆ ಹಾಜರಾಗಲು ಇಚ್ಚಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಯಲಿದೆ. ಅವಶ್ಯವಾದರೆ ಭೌತಿಕ ಸಂಪರ್ಕ ತರಗತಿಗಳನ್ನು ನಡೆಸಲು ತೀರ್ಮಾನಿಸಿದೆ. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಅಧ್ಯಯನ ಸಾಮಗ್ರಿಗಳನ್ನು ವಾಟ್ಸ್ ಆ್ಯಪ್, ಇ-ಮೇಲ್ ಮೂಲಕ ನೀಡುವುದು ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಕಡ್ಡಾಯ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಗತಿ ಆರಂಭಕ್ಕೂ ಪೂರ್ವದಲ್ಲಿ ಸರ್ಕಾರ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳು ವಿವಿಯಲ್ಲಿ ಪಾಲಿಸಲಾಗುತ್ತಿದೆ. ಕರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕಾರ ನೀಡುವ ಮೂಲಕ ತರಗತಿಗಳು ಯಾವುದೇ ತೊಂದರೆಯಾಗದಂತೆ ನಡೆಯಲು ಅನುವು ಮಾಡಿಕೊಡಬೇಕು. ಪ್ರೊ.ವೈ.ಎಸ್.ಸಿದ್ದೇಗೌಡ ಕುಲಪತಿ, ತುಮಕೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net