

ಬೆಂಗಳೂರು: ನಗರದ ಕೋಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡದೇ ಕಿಟ್ ನಾಶ ಮಾಡುತ್ತಿದ್ದ ಇಬ್ಬರು ಸ್ವಾಬ್ ಕಲೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.
ಕೋವಿಡ್ ವೇಳೆ ಸ್ವಾಬ್ ಕಲೆಕ್ಟರ್‌ಗಳಾಗಿ ಗುತ್ತಿಗೆ ಆಧಾರದಲ್ಲಿ ನಿಯೋಜಿತಗೊಂಡಿದ್ದ ಆರೋಗ್ಯ ಸಿಬ್ಬಂದಿ ಹೇಮಂತ್ ಮತ್ತು ನಾಗರಾಜ್ ಅವರು ಅಮಾನತು ಆಗಿದ್ದಾರೆ. ಜತೆಗೆ, ಇವರ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪಾಲಿಕೆಯಿಂದ ಎಫ್ಐಆರ್ ದಾಖಲಿಸಲಾಗಿದೆ.
ನಗರದಲ್ಲಿ ಕರೊನಾ 2ನೇ ಅಲೆಯ ಸೋಂಕು ಹರಡುವಿಕೆ ತೀವ್ರ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಆರೋಗ್ಯ ಸಿಬ್ಬಂದಿಗೆ ಟಾರ್ಗೆಟ್ ಆಧಾರದಲ್ಲಿ ಕೋವಿಡ್ ಪರೀಕ್ಷೆ ಮಾಡುವು ಜವಾಬ್ದಾರಿ ನೀಡಲಾಗುತ್ತಿದೆ. ಆದರೆ, ಕೋಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ತಮಗೆ ನೀಡಿದ್ದ ಕೋವಿಡ್ ಟೆಸ್ಟ್ ಕಿಟ್‌ಗಳನ್ನು ತೆಗೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗದೆ ಅವುಗಳನ್ನು ನಾಶ ಮಾಡಿದ್ದಾರೆ. ಈ ಮೂಲಕ ತಮಗೆ ಕೊಟ್ಟಿರುವ ಟಾರ್ಗೆಟ್ ತಲುಪಿದ್ದೇವೆ ಎಂದು ಪಾಲಿಕೆ ಕೇಂದ್ರ ಕಚೇರಿಗೆ ಮಾಹಿತಿ ನೀಡುತ್ತಿದ್ದರು.
ವೀಡಿಯೋದಿಂದ ಸಿಕ್ಕಿಬಿದ್ದರು: ಆಸ್ಪತ್ರೆಯಲ್ಲಿರುವ ಕೋವಿಡ್ ಟೆಸ್ಟ್ ಕಿಟ್‌ಗಳಲ್ಲಿರುವ ಮೂಗು ಅಥವಾ ಗಂಟಲು ದ್ರವ ಸಂಗ್ರಹಣೆಯ ಕಡ್ಡಿಗಳನ್ನು ಮುರಿದು ಕಿಟ್‌ನ ಒಳಗೆ ಹಾಕಿ ಪರೀಕ್ಷೆಗೆ ಕಳಿಸಲಾಗುತ್ತಿತ್ತು. ಅವರು ಮಾಡುತ್ತಿದ್ದ ಕಾರ್ಯವನ್ನು ಸಹ ಸಿಬ್ಬಂದಿ ವೀಡಿಯೋ ಮಾಡಿದ್ದಾರೆ. ಮೋಹನ್ ಮತ್ತು ನಾಗರಾಜ್ ಅವರು ಟೆಸ್ಟ್ ಕಿಟ್ ನಾಶ ಮಾಡುತ್ತಿದ್ದು, ಈ ಕಾರ್ಯಕ್ಕೆ ಇತರೆ ಮೂವರು ಸಿಬ್ಬಂದಿ ಮಾತನಾಡುತ್ತಾ ಸಹಕಾರ ನೀಡುತ್ತಿದ್ದಾರೆ. ಈ ವಿಡಿಯೋ ಮಾಡುವಾಗ ನಮ್ಮನ್ನು ಯಾರೂ ಏನು ಮಾಡಿಕೊಳ್ಳಲಾಗುವುದಿಲ್ಲ ಎಂಬ ಉಡಾಫೆ ಮಾತನಾಡಿದ್ದು, ಈಗ ವೀಡಿಯೋ ವೈರಲ್ ಆಗಿ ಅಮಾನತಾಗಿದ್ದಾರೆ.