ಸೋಂಕಿತರ ಸಂಪರ್ಕಿತರಿಗೂ ಪರೀಕ್ಷೆ ನಡೆಸಲು ಸೂಚನೆ

Covid
Published on

ಬೆಂಗಳೂರು: ಕೋವಿಡ್ ಹರಡುವಿಕೆ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ರೋಗ ಲಕ್ಷಣ ಹೊಂದಿರುವ ಸೋಂಕಿತರ ಸಂಪರ್ಕಿತರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್‌ನ ಉಪತಳಿ ಜೆಎನ್.1 ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ. ಇದರಿಂದ ಕೋವಿಡ್ ಪರೀಕ್ಷೆ ಸೋಂಕಿತರ ಪತ್ತೆ ಹಾಗೂ ಚಿಕಿತ್ಸೆಗೆ ಅನುಕೂಲವಾಗಲಿದೆ. ಆದ್ದರಿಂದ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಸೋಂಕಿತರ ಸಂಪರ್ಕಿತರಿಗೂ ಪರೀಕ್ಷೆ ನಡೆಸುವ ಬಗ್ಗೆ ಅಗತ್ಯ ಕ್ರಮವಹಿಸಲು ಸೂಚಿಸಿದ್ದಾರೆ.

ರಾಜ್ಯದಲ್ಲಿ 500ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಹೆಚ್ಚಿನವರು ಮನೆ ಆರೈಕೆಗೆ ಒಳಗಾಗಿದ್ದಾರೆ. ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್ ಸೇರಿ ವಿವಿಧ ಆರೋಗ್ಯ ಕೇಂದ್ರಗಳ ವೈದ್ಯರು ಸೋಂಕಿತರಿಗೆ ಚಿಕಿತ್ಸೆ ಹಾಗೂ ಆರೈಕೆ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯ ಆರೋಗ್ಯಾಧಿಕಾರಿಗಳು ಇದರ ಮೇಲ್ವಿಚಾರಣೆ ನಡೆಸಬೇಕು ಎಂದು ತಿಳಿಸಿದ್ದಾರೆ.

ಡೆತ್ ಆಡಿಟ್ ವರದಿ: ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಾಗಿರುವ ಸೋಂಕಿತರನ್ನು ಟೆಲಿ ಐಸಿಯು ಮೂಲಕ ಮೇಲ್ವಿಚಾರಣೆ ಮಾಡಬೇಕು. ಜಿಲ್ಲಾ ಮರಣ ಪರಿಶೋಧನೆ (ಡೆತ್ ಆಡಿಟ್) ಸಮಿತಿಯು ಕೋವಿಡ್ ಮರಣಗಳ ಪರಿಶೋಧನೆಯನ್ನು ನಿಯಮಿತವಾಗಿ ಮಾಡಬೇಕು. ರಾಜ್ಯ ಮರಣ ಪರಿಶೋಧನೆ ಸಮಿತಿಯು ಈ ಬಗ್ಗೆ ವರದಿ ತಯಾರಿಸಿ, ಆರೋಗ್ಯ ಆಯುಕ್ತಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ವಾರ್ಡ್‌ಗಳನ್ನು ಸಜ್ಜುಗೊಳಿಸಬೇಕು: ಹೊಸವರ್ಷದ ಆಚರಣೆಯ ದೃಷ್ಟಿಯಿಂದ ಜಿಲ್ಲೆಗಳಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳು ಐಸಿಯು ಹಾಸಿಗೆಗಳನ್ನು ಒಳಗೊಂಡಂತೆ ಪ್ರತ್ಯೇಕ ಕೋವಿಡ್ ವಾರ್ಡ್‌ಗಳನ್ನು ಸಜ್ಜುಗೊಳಿಸಬೇಕು. ರೋಗನಿರ್ಣಯಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಸಿ.ಟಿ. ಸ್ಕ್ಯಾನ್ ಮಾಡಬಾರದು. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಗೆ ಫ್ಲೂ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net