

ಬೆಂಗಳೂರು: ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಹೃದ್ರೋಗ ಹಾಗೂ ಉಸಿರಾಟದ ಸಮಸ್ಯೆ ಅಷ್ಟೇ ಅಲ್ಲದೆ ಇದೀಗ ನರಮಂಡಲದ ಮೇಲೂ ತೀವ್ರ ಪರಿಣಾಮ ಉಂಟಾಗಲಿದೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಸಾನ ಸಂಸ್ಥೆ (ನಿಮ್ಹಾನ್ಸ್) ನಡೆಸಿದ ಅಧ್ಯಯನದಿಂದ ಬಹಿರಂಗಗೊಂಡಿದೆ.
ನಿಮ್ಹಾನ್ಸ್‌ನ ನರವಿಜ್ಞಾನ ಪ್ರಾಧ್ಯಾಪಕಿ ಡಾ.ಎಂ.ನೇತ್ರಾವತಿ ನೇತೃತ್ವದ ತಜ್ಞರ ತಂಡ ಅಧ್ಯಯನ ನಡೆಸಿದ್ದು, ಸಾಂಕ್ರಾಮಿಕ ರೋಗದ ಮೊದಲ ಅಲೆ ಮತ್ತು ನಂತರದ ಲಸಿಕೆ ಅಭಿಯಾನ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಕೋವಿಡ್ ವೈರಾಣು ರೋಗಿಯ ನರಮಂಡಲದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆ ತಿಳಿಸಿದೆ.
ಅಧ್ಯಯನ ಸಂಬಂಧ 2020ರ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ನರಸಂಬಂಧಿ ಸಮಸ್ಯೆಯಿಂದ ಸಂಸ್ಥೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 3,200 ರೋಗಿಗಳ ವಿಶ್ಲೇಷಣೆ ಮಾಡಲಾಗಿದೆ. ಈ ಪೈಕಿ 120 (ಶೇ. 3.75) ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ ನರಮಂಡಲದ ಸಮಸ್ಯೆ ಪತ್ತೆಯಾಗಿದೆ. ಇವರಲ್ಲಿ 80 ಪುರುಷರ ಹಾಗೂ 40 ಮಹಿಳೆಯರೂ ಇದ್ದಾರೆ.
ಲಸಿಕೆಯಿಂದ ತೊಂದರೆಯಿಲ್ಲ:
2021ರ ಮೇನಿಂದ ಡಿಸೆಂಬರ್‌ವರೆಗೆ ಕೋವಿಡ್ ಲಸಿಕೆ ಪಡೆದ ನಂತರ ನರರೋಗದ ಲಕ್ಷಣಗಳ ಬಗ್ಗೆ ರೋಗಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಲಸಿಕೆಗಳಿಂದ ನರರೋಗ ಸಮಸ್ಯೆಯಲ್ಲಿ ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಬದಲಿಗೆ ಗುಯಿಲಿನ್-ಬಾರ್‌ಸಿಂಡ್ರೋಮ್ ಅಥವಾ ಡಿಮೈಲಿನೇಷನ್‌ನಂತಹ ಪ್ರಕರಣಗಳು ಕಂಡು ಬಂದರೂ ಅದರ ಪ್ರಮಾಣ ಏರಿಕೆಯಾಗಿಲ್ಲ.
ವಿಶ್ಲೇಷಣೆಯ ವಿವರ:
ಅಧ್ಯಯನದಲ್ಲಿ ಕೋವಿಡ್ ಸೋಂಕಿತರಲ್ಲಿ 43 ಜನ ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿದ್ದಾರೆ. 23 ಮಂದಿಯಲ್ಲಿ ಎನ್ಸೆಲೋಪಥಿ (ಮಿದುಳಿನ ರಚನೆ ಅಥವಾ ಕಾರ್ಯದ ಮೇಲೆ ಪರಿಣಾಮ ಬೀರುವ ಕಾಯಿಲೆ) ಪತ್ತೆಯಾಗಿದೆ. 20 ಮಂದಿ ಮೊದಲೇ ನರರೋಗ ಕಾಯಿಲೆ ಹೊಂದಿದ್ದರು. 5 ಜನರಲ್ಲಿ ಮೆನಿಂಗೊಎನ್ಸೆಾಲಿಟಿಸ್ (ಮಿದುಳು ಮತ್ತು ಬೆನ್ನು ಹುರಿ ಸುತ್ತ ಉರಿಯೂತ), 5 ಮಂದಿಯಲ್ಲಿ ನರ ರೋಗಗ್ರಸ್ತವಾಗುವಿಕೆ, 7 ಜನರಲ್ಲಿ ತಲೆನೋವು ಮತ್ತು 10 ಮಂದಿಯಲ್ಲಿ ಗುಯಿಲಿನ್-ಬಾರ್ ಸಿಂಡ್ರೋಮ್ ಪ್ರಕರಣಗಳು ಕಂಡು ಬಂದಿವೆ. ಉಳಿದಂತೆ ಮೂವರಲ್ಲಿ ಗಂಭೀರ ನರರೋಗ ಸಮಸ್ಯೆ.ಇಬ್ಬರಲ್ಲಿ ಕ್ರೇನಿಯಲ್ ನರರೋಗ, ಒಬ್ಬರಲ್ಲಿ ಆತಂಕ ಹಾಗೂ ಒಬ್ಬರಲ್ಲಿ ತೀವ್ರ ಪ್ರಸರಣಗೊಂಡ ಎನ್ಸೆಲೋಮೈಲಿಟಿಸ್ ಸೇರಿ 120 ಮಂದಿಯಲ್ಲಿ ನರಮಂಡಲದ ವಿವಿಧ ರೀತಿಯ ಸಮಸ್ಯೆಗಳು ಪತ್ತೆಯಾಗಿವೆ.
ತಜ್ಞರ ಶಿಫಾರಸುಗಳು:
* ಕೋವಿಡ್ ಸೋಂಕು ಮತ್ತು ಲಸಿಕೆಯ ದೀರ್ಘಕಾಲೀನ ನರರೋಗದ ಪರಿಣಾಮಗಳನ್ನು ಪತ್ತೆ ಹಚ್ಚಲು ರಾಷ್ಟ್ರವ್ಯಾಪಿ ನೋಂದಣಿ ಆರಂಭಿಸಬೇಕು.
* ಆರೋಗ್ಯಕರ ಜೀವನಶೈಲಿ ಪ್ರೋತ್ಸಾಹಿಸುವುದು.
* ಮೊಬೈಲ್ ಬಳಕೆ ಕಡಿಮೆ ಮಾಡಿ, ದೈಹಿಕ ಚಟುವಟಿಕೆ ಹೆಚ್ಚಿಸಿ, ಉತ್ತಮ ನಿದ್ರೆಗೆ ಆದ್ಯತೆ.
* ಕೋವಿಡ್‌ನಲ್ಲಿ ಸಾಂಕ್ರಾಮಿಕ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕು.
* ಕೋವಿಡ್ ಮತ್ತು ಲಸಿಕೆಯ ದೀರ್ಘಕಾಲೀನ ಪರಿಣಾಮಗಳ ಕುರಿತು ಅಧ್ಯಯನ ನಡೆಸಬೇಕು.