ಸಿಗುತ್ತಿಲ್ಲ ಕೋವಿಡ್ ಪರಿಹಾರ!; ಪಾಸಿಟಿವ್ ಬಂದರೂ ಎಸ್​ಆರ್​ಎಫ್ ಐಡಿ ಸಿಗದೆ ಪರದಾಟ

Huligemma
ಕರೊನಾ ನಿರ್ಬಂಧ ನಡುವೆಯೂ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಹುಣ್ಣಿಮೆ ಹಿನ್ನೆಲೆಯಲ್ಲಿ ಸೋಮವಾರ ಸಾವಿರಾರು ಭಕ್ತರು ಆಗಮಿಸಿದ್ದರು.
Published on

| ಶ್ರೀಕಾಂತ ಅಕ್ಕಿ ಬಳ್ಳಾರಿ

ಕರೊನಾ ಪಾಸಿಟಿವ್ ಬಂದವರ ಎಸ್​ಆರ್​ಎಫ್ ಐಡಿ ರಚನೆಯಾಗದ ಪರಿಣಾಮ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಸಿಗದಂತಾಗಿದೆ. ಹಲವು ತಿಂಗಳಿಂದ ಪರಿಹಾರಕ್ಕಾಗಿ ಕುಟುಂಬಗಳು ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಬಾಗಿಲು ಬಡಿಯುತ್ತಿದ್ದರೂ ಇತ್ಯರ್ಥ ಕಾಣುತ್ತಿಲ್ಲ. ಮೊದಲ ಮತ್ತು ಎರಡನೇ ಅಲೆ ಮುಗಿದು ಮೂರನೇ ಅಲೆ ಕಾಲಿಟ್ಟಿದ್ದರೂ ತಾಂತ್ರಿಕ ಸಮಸ್ಯೆ ಬಗೆಹರಿಸದ ಅಧಿಕಾರಿಗಳ ನಡೆಯಿಂದ ಬೇಸತ್ತಿರುವ ರಾಜ್ಯದ 1550 ಕುಟುಂಬಗಳು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿವೆ.

ಎರಡನೇ ಅಲೆ ವೇಳೆ ಕೋವಿಡ್​ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಮತ್ತು ಎಪಿಎಲ್ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ವಾಗ್ದಾನ ಮಾಡಲಾಗಿತ್ತು. ಅದರಂತೆ ಪರಿಹಾರ ವಿತರಣೆ ಕಾರ್ಯವೂ ನಡೆದಿದೆ. ಆದರೆ, ಹಲವರದ್ದು ಆರ್​ಟಿಪಿಸಿಆರ್​ನಲ್ಲಿ ಕೋವಿಡ್ ಪಾಸಿಟಿವ್ ಬಂದರೆ, ಕೆಲವರದ್ದು ರ್ಯಾಟ್​ನಲ್ಲಿ ಪಾಸಿಟಿವ್ ಬಂದಿತ್ತು. ಇನ್ನೂ ಕೆಲವರದು ಎರಡೂ ಪರೀಕ್ಷೆಗಳಲ್ಲಿ ಪಾಸಿಟಿವ್ ಬಂದಿಲ್ಲ. ಇಂಥವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದು ವೈದ್ಯರಿಗೆ ಸವಾಲಾಗಿತ್ತು. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿದಾಗ ಸೋಂಕಿರುವುದು ದೃಢಪಟ್ಟಿತ್ತು.

ಯಾಕೆ ನೀಡಲಾಗುತ್ತಿಲ್ಲ?: ಆಸ್ಪತ್ರೆಗಳು ವ್ಯಕ್ತಿಯ ಡೆತ್ ಸಮ್ಮರಿಯಲ್ಲಿ ರ್ಯಾಟ್, ಆರ್​ಟಿಪಿಸಿಆರ್​ನಲ್ಲಿ ಕರೊನಾ ನೆಗಟಿವ್ ಬಂದಿದ್ದರೂ ಸ್ಕಾ್ಯನಿಂಗ್​ನಲ್ಲಿ ಪಾಸಿಟಿವ್ ಬಂದಿದೆ ಎಂದು ವಿವರವಾಗಿ ಬರೆದಿದ್ದಾರೆ. ಅರ್ಹ ಕುಟುಂಬಗಳು ಪರಿಹಾರಕ್ಕಾಗಿ ರಾಜ್ಯದ 31 ಜಿಲ್ಲೆ ವ್ಯಾಪ್ತಿಯ ಆರೋಗ್ಯ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಸಲ್ಲಿಸಿದರೂ ಪರಿಗಣನೆಯಾಗುತ್ತಿಲ್ಲ.

ಎರಡನೇ ಅಲೆ ವೇಳೆ ನಮ್ಮ ತಂದೆಯನ್ನು ಬಳ್ಳಾರಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ರ್ಯಾಟ್ ಮತ್ತು ಆರ್​ಟಿಪಿಸಿಆರ್​ನಲ್ಲಿ ನೆಗಟಿವ್ ಬಂತು. ಆರೋಗ್ಯದಲ್ಲಿ ಚೇತರಿಕೆ ಕಾಣದ ಪರಿಣಾಮ ಬೆಂಗಳೂರಿಗೆ ಕರೆದ್ಯೊಯಲಾಯಿತು. ಅಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಕರೊನಾ ಪಾಸಿಟಿವ್ ಬಂತು. ಚಿಕಿತ್ಸೆ ಫಲಿಸದೆ ತೀರಿಕೊಂಡರು. ಅರ್ಜಿ ಸಲ್ಲಿಸಿದರೂ ಪರಿಗಣಿಸುತ್ತಿಲ್ಲ. | ನಾಗಮೂರ್ತಿ ಕೆ.ಎಂ. ಸಂಡೂರಿನ ನಿವಾಸಿ ಸರ್ಕಾರ ಪರಿಹಾರ ನೀಡುವಂತೆ ಜಿಲ್ಲೆಯ ಎಡಿಸಿಗಳಿಗೆ ಈ ಹಿಂದೆ ಸೂಚಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕಮಿಟಿ ಮಾಡುವಂತೆ ತಿಳಿಸಲಾಗಿದೆ. ಕಂದಾಯ ಇಲಾಖೆ ಮೂಲಕ ಪರಿಹಾರ ವಿತರಣೆಯಾಗಲಿದ್ದು, ಆಯಾ ಜಿಲ್ಲೆಗಳ ಎಡಿಸಿ ಸಂರ್ಪಸಿದರೆ ಸಮಸ್ಯೆ ಇತ್ಯರ್ಥವಾಗಲಿದೆ. | ಟಿ.ಕೆ.ಅನೀಲಕುಮಾರ್ ಅಪರ ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ, ಬೆಂಗಳೂರು

ಟೆಸ್ಟ್ ಹೆಚ್ಚಿದಂತೆ ಸೋಂಕು ಹೆಚ್ಚಳ ಸಹಜ

ಬೆಂಗಳೂರು: ಕರೊನಾ ಟೆಸ್ಟ್​ಗಳು ಹೆಚ್ಚಿದಂತೆ ಸೋಂಕು ಪ್ರಕರಣಗಳ ಹೆಚ್ಚಳವಾಗುವುದು ಸಹಜ. ಬೆಳವಣಿಗೆ ಗಮನಿಸಿ ಸರ್ಕಾರ ಕಟ್ಟುನಿಟ್ಟಿ ಕ್ರಮವಹಿಸಿದ್ದರಿಂದ ಸೋಂಕು ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸಮಜಾಯಿಷಿ ನೀಡಿದರು. ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪಾಸಿಟಿವಿಟಿ ದರ, ಸಾವು ಹಾಗೂ ದೈನಂದಿನ ಪ್ರಕರಣಗಳು ಕಡಿಮೆ ಎಂದರು. ಡಿಸೆಂಬರ್​ನಿಂದ ಫೆಬ್ರವರಿ ಅವಧಿಯಲ್ಲಿ ಜ್ವರ ಪ್ರಕರಣಗಳು ಹೆಚ್ಚಾಗಿರುತ್ತವೆ. ರಾಜ್ಯದಲ್ಲಿ ಸದ್ಯಕ್ಕೆ ಕಾಣಿಸಿಕೊಂಡಿರುವ ಜ್ವರ, ಶೀತ, ಕೆಮ್ಮು, ನೆಗಡಿಗೂ ಕರೊನಾಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಸೋಂಕಿತರ ಸಂಖ್ಯೆ ಕೊಂಚ ಇಳಿಕೆ

ಬೆಂಗಳೂರು: ಕೋವಿಡ್ ಹರಡುವಿಕೆ ನಿಯಂತ್ರಿಸಲು ವಾರಾಂತ್ಯ ಕರ್ಫ್ಯೂ ವಿಧಿಸಿದ್ದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, 27,156 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ.12.45ಕ್ಕೆ ಇಳಿಕೆಯಾಗಿದ್ದರೂ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 5, ದಕ್ಷಿಣ ಕನ್ನಡ 3, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಕಲಬುರಗಿ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ ಒಬ್ಬರಂತೆ 14 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಒಟ್ಟು ಸಂಖ್ಯೆ 38,445ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 7,827 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.91 ಲಕ್ಷ ಮೀರಿದೆ. ಈವರೆಗೂ 32.47 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಬೆಂಗಳೂರು ನಗರ 15,947, ಮೈಸೂರು 1,770, ತುಮಕೂರು 1,147, ಹಾಸನ 1,050, ಮಂಡ್ಯ 917, ಧಾರವಾಡ 784, ಬಳ್ಳಾರಿ 560, ಬೆಂಗಳೂರು ಗ್ರಾಮಾಂತರ 538, ದಕ್ಷಿಣ ಕನ್ನಡ 490, ಕಲಬುರಗಿ 479, ಕೋಲಾರ 463, ಉಡುಪಿ 442 ಸೋಂಕು ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,17, 297ಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net