ಕೋವಿಡ್ ಮೃತರ ಸಂಖ್ಯೆ 6ಕ್ಕೆ ಏರಿಕೆ

Covid
Published on

ಬೆಂಗಳೂರು: ಕೋವಿಡ್ ಸೋಂಕಿಗೆ ಒಳಗಾಗಿದ್ದ ಉಡುಪಿಯ 65 ವರ್ಷದ ವೃದ್ಧ ಹಾಗೂ ಬೆಂಗಳೂರಿನ 42 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ ಹೊಂದಿದ್ದು, ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿಯ ವೃದ್ಧ ಉಸಿರಾಟದ ತೊಂದರೆ ಸೇರಿ ಕೋವಿಡ್ ರೋಗ ಲಕ್ಷಣದಿಂದ ಕಳೆದ ತಿಂಗಳು 30ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಜೂ. 2ರಂದು ಮೃತಪಟ್ಟಿದ್ದು, ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ತೀವ್ರ ಜ್ವರ, ಕೆಮ್ಮು ಮತ್ತು ಉಸಿರಾಟ ಸಮಸ್ಯೆಯಿಂದ ಮೇ 26ರಂದು ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನ ವ್ಯಕ್ತಿ ಮೇ 31ರೊಂದು ಮೃತಪಟ್ಟಿದ್ದರು. ಉಸಿರಾಟದ ತೊಂದರೆ ಹೊಂದಿದ್ದ ಅವರ ಗಂಟಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇನ್ನು ರಾಜ್ಯದಲ್ಲಿ ಬುಧವಾರ 153 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 324 ತಲುಪಿದೆ.

ಕೋವಿಡ್ ವೈರಾಣು ಪತ್ತೆ ಸಂಬಂಧ ಕಳೆದ 24 ಗಂಟೆಗಳಲ್ಲಿ 592 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢ ಪ್ರಮಾಣ ಶೇ. 25.8 ವರದಿಯಾಗಿದೆ. ಸಕ್ರಿಯ ಪ್ರಕರಣಗಳಲ್ಲಿ 317 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಉಳಿದಂತೆ 7 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net