

ಬೆಂಗಳೂರು: ಕೋವಿಡ್ ಸೋಂಕಿಗೆ ಒಳಗಾಗಿದ್ದ ಮೈಸೂರಿನ 63 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಈ ವರ್ಷ ರಾಜ್ಯದಲ್ಲಿ ವರದಿಯಾದ 3ನೇ ಕೋವಿಡ್ ಮರಣ ಪ್ರಕರಣ ಇದಾಗಿದೆ.
ಮೃತ ವ್ಯಕ್ತಿ ಕಿಡ್ನಿ ವೈಲ್ಯದಿಂದ ಬಳಲುತ್ತಿದ್ದು, ಮೇ 15ರಂದು ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಲಿಸದೆ ಮೇ 25ರಂದು ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆ ಹೊಂದಿದ್ದ ಅವರ ಗಂಟಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಶುಕ್ರವಾರ 114 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 234 ತಲುಪಿದೆ. ಕೋವಿಡ್ ವೈರಾಣು ಪತ್ತೆ ಸಂಬಂಧ ಕಳೆದ 24 ಗಂಟೆಗಳಲ್ಲಿ 460 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢ ಪ್ರಮಾಣ ಶೇ. 24.7 ವರದಿಯಾಗಿದೆ. ಸಕ್ರಿಯ ಪ್ರಕರಣಗಳಲ್ಲಿ 223 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಉಳಿದಂತೆ 11 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಈವರೆಗೂ ಒಟ್ಟು 367 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 130 ಮಂದಿ ಚೇತರಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ.