

ಬೆಂಗಳೂರು: ಕರೊನಾ ಹೊಸ ಸೋಂಕಿತರ ಪ್ರಕರಣಗಳ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಕೋವಿಡ್ನಿಂದ ಗುಣಹೊಂದಿದ್ದ ಮಹಿಳೆಗೆ ಮತ್ತೆ ಸೋಂಕು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ.
ಒಮ್ಮೆ ಕರೊನಾ ಗುಣಮುಖರಾಗಿದ್ದ ಬೆಂಗಳೂರಿನ ಮಹಿಳೆಯಲ್ಲಿ ಮತ್ತೊಮ್ಮೆ ಕರೊನಾ ಸೋಂಕು ದೃಢಪಟ್ಟಿರುವುದನ್ನು ಖಾಸಗಿ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ. ಇದು ಕರೊನಾ ಕುರಿತ ಸರ್ಕಾರದ ಕ್ರಮಗಳು, ಅನ್ಲಾಕ್ ಕುರಿತು ಮರುಚಿಂತನೆಗೆ ಈಡು ಮಾಡುವಂತಿದೆ.
ಇದನ್ನೂ ಓದಿ: ಸೋದರಿಯ ಫೋನ್ ಮೂಲಕ ಪತ್ನಿಗೆ ತಲಾಖ್ ಹೇಳಿದ..!
ಫೋರ್ಟಿಸ್ ಆಸ್ಪತ್ರೆಯಲ್ಲಿ 27 ವರ್ಷದ ಮಹಿಳೆ ಎರಡನೇ ಬಾರಿಗೆ ಕರೊನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಈ ಮಹಿಳೆಯಲ್ಲಿ ಜುಲೈನಲ್ಲಿ ಮೊದಲ ಬಾರಿಗೆ ಕರೋನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ನಂತರ ಸಂಪೂರ್ಣ ಗುಣಮುಖರಾಗಿದ್ದರು. ಜುಲೈನಲ್ಲಿ ಜ್ವರ ಮತ್ತು ಕೆಮ್ಮಿನ ಸೌಮ್ಯಲಕ್ಷಣಗಳು ಪತ್ತೆಯಾಗಿದ್ದವು. ನಂತರ ಅವರನ್ನು ಪರೀಕ್ಷೆಗಳಿಗೆ ಒಳಪಡಿಸಿದಾಗ ಕರೊನಾ ದೃಢಪಟ್ಟಿದೆ.
ಸೌಮ್ಯ ಲಕ್ಷಣಗಳಿವೆ: ಎರಡನೇ ಬಾರಿಗೆ ಸೋಂಕು ದೃಢಪಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಫೋರ್ಟಿಸ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಸಹಾಯಕ ಡಾ.ಪ್ರತೀಕ್ ಪಾಟೀಲ್, ಜುಲೈ ಮೊದಲ ವಾರದಲ್ಲಿ ಮಹಿಳೆಗೆ ಕರೋನದ ಲಕ್ಷಣಗಳಿದ್ದವು. ಚಿಕಿತ್ಸೆಯ ನಂತರ ಪರೀಕ್ಷಿಸಿದಾಗ ಗುಣಪಟ್ಟಿದ್ದು ದೃಢವಾಗಿತ್ತು, ಜುಲೈ 24 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಒಂದು ತಿಂಗಳ ನಂತರ, ಆಗಸ್ಟ್ ಕೊನೆಯಲ್ಲಿ, ಮತ್ತೆ ಸೌಮ್ಯ ಲಕ್ಷಣಗಳು ಕಂಡುಬಂದಿವೆ, ಪರೀಕ್ಷೆಯಿಂದಲೂ ದೃಢಪಟ್ಟಿದೆ. ಎರಡೂ ಬಾರಿ ಅವರಿಗೆ ಯಾವುದೇ ಗಂಭೀರ ಸಮಸ್ಯೆಗಳಿರಲಿಲ್ಲ ಎಂದಿದ್ದಾರೆ. ವಿಶ್ವದ ಕೆಲವು ದೇಶಗಳಲ್ಲಿ ಎರಡನೇ ಅಲೆಯ ಕರೊನಾ ಸುದ್ದಿಗಳಿವೆ. ಭಾರತದಲ್ಲಿ ಈ ಕುರಿತು ದೃಢಡಿಸುವಷ್ಟು ದತ್ತಾಂಶಗಳಿಲ್ಲ ಎಂದು ಇತ್ತೀಚೆಗೆ ವಿಜ್ಞಾನಿಗಳು ಹೇಳಿದ್ದರು. ಇದೀಗ ಬೆಂಗಳೂರಿನಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಅದೂ ಸೌಮ್ಯವಾಗಿದೆ. ಇದೊಂದೇ ಪ್ರಕರಣದಿಂದ ಎರಡನೇ ಅಲೆಯನ್ನು ದೃಢಪಡಿಸಲಾಗದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:
ಪರೀಕ್ಷೆಯ ಸಮಸ್ಯೆ?: ಸರ್ಕಾರದಿಂದ ನಡೆಸುತ್ತಿರುವ ವಿವಿಧ ಪರೀಕ್ಷೆಗಳ ಪೈಕಿ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಸಂಪೂರ್ಣ ನಿಖರವಾದ ಫಲಿತಾಂಶ ನೀಡುವುದಿಲ್ಲ. ಇದರ ಜತೆಗೆ, ಗುಣಲಕ್ಷಣಗಳಿಲ್ಲದ ಸೋಂಕಿತರು ನಿರಂತರ 10 ದಿನ ಸೋಂಕಿನ ಗುಣಲಕ್ಷಣಗಳನ್ನು ಹೊಂದಿಲ್ಲದಿದ್ದರೆ ಅಂಥವರನ್ನು ಪರೀಕ್ಷೆ ನಡೆಸದೆಯೇ ಗುಣಮುಖರು ಎಂದು ಘೋಷಿಸುವಂತೆ ಐಸಿಎಂಆರ್ ಮಾರ್ಗಸೂಚಿಯೇ ತಿಳಿಸಿದೆ. ಎರಡನೇ ಬಾರಿ ಸೋಂಕಿನ ಮತ್ತಷ್ಟು ಪ್ರಕರಣಗಳು ಕಂಡುಬಂದರೆ ಪರೀಕ್ಷೆ ವಿಧಾನ ಹಾಗೂ ಕರೊನಾ ನಿರ್ವಹಣೆಯ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.