

ಬೆಂಗಳೂರು: ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಕರೊನಾ ಸೋಂಕಿತ ರೋಗಿ ಆಸ್ಪತ್ರೆಗೆ ದಾಖಲಾಗುವುದು ವಿಳಂಬವಾಗುತ್ತಿದೆ. ಇದರಿಂದ ತುರ್ತು ನಿಗಾ ಘಟಕ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಮತ್ತಷ್ಟು ಸಾವು-ನೋವು ಸಂಭವಿಸುವ ಆತಂಕ ಸೃಷ್ಟಿಯಾಗಲು ಸರ್ಕಾರವೇ ಕಾರಣವಾಗಿದೆ.
ವ್ಯಕ್ತಿಗೆ ಸೋಂಕು ತಗುಲಿರುವುದು ಖಾತ್ರಿ ಆದರೂ ಆತ ಆಸ್ಪತ್ರೆ ಸೇರುವುದು ವಿಳಂಬವಾಗುತ್ತಿದೆ. ಅಂದರೆ ಸೋಂಕು ದೃಢಪಟ್ಟ 1-2ನೇ ದಿನಕ್ಕೆ ಆಸ್ಪತ್ರೆ ಸೇರುತ್ತಿದ್ದಾರೆ. ಅಷ್ಟರಲ್ಲಿ ಅವರಿಂದ ಇನ್ನಷ್ಟು ಮಂದಿ ಸೋಂಕಿಗೆ ಒಳಗಾಗಿರುತ್ತಾರೆ. ಅಷ್ಟೇ ಅಲ್ಲ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರು ಕ್ವಾರಂಟೈನ್ನಿಂದ ತಪ್ಪಿಸಿಕೊಳ್ಳುತ್ತಿದ್ದು, ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.
‘ನಗರದಲ್ಲಿ ನಿತ್ಯ 500-600 ಸೋಂಕಿತರನ್ನು ಶಿಫ್ಟ್ ಮಾಡಬೇಕು. ಇದರಿಂದಾಗಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಅವರ ಮನೆ ಸೀಲ್ಡೌನ್ ಮಾಡಲು ವಿಳಂಬವಾಗುತ್ತಿದೆ. ಪರಿಸ್ಥಿತಿಯನ್ನು ಜನರೂ ಅರ್ಥ ಮಾಡಿಕೊಳ್ಳಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರು ಸ್ವತಃ ಕ್ವಾರಂಟೈನ್ಗೆ ಒಳಗಾಗಬೇಕು.’ | ಅನಿಲ್ ಕುಮಾರ್ ಆಯುಕ್ತ, ಬಿಬಿಎಂಪಿ
ಆಸ್ಪತ್ರೆ ಸೇರುವಷ್ಟರಲ್ಲಿ ರೋಗಿ ಗಂಭೀರ!: ಸೋಂಕಿತ ವ್ಯಕ್ತಿಗೆ ಕರೆ ಮಾಡುವ ಪಾಲಿಕೆ ಸಿಬ್ಬಂದಿ‘‘ ನಿಮಗೆ ಸೋಂಕು ತಗುಲಿದೆ, ಆಂಬುಲೆನ್ಸ್ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಇಂತಹ ಸ್ಥಳಕ್ಕೆ ಬನ್ನಿ’ ಎಂದು ಹೇಳುತ್ತಾರೆ. ಆದರೆ ಹಾಗೆ ಹೋಗುವ ಸೋಂಕಿತ ದಿನಪೂರ್ತಿ ರಸ್ತೆಯಲ್ಲೇ ಕಾಯುತ್ತ ನಿಲ್ಲಬೇಕಾದ ಸ್ಥಿತಿ ಇದೆ. ಕೆಲವರಿಗೆ ಬೆಳಗ್ಗೆ ಕರೆ ಬಂದರೆ ರಾತ್ರಿ 10.30. 11.00 ಗಂಟೆಗೆ ಬಂದು ಕರೆದುಕೊಂಡು ಹೋಗಿದ್ದಾರೆ. ಇನ್ನೂ ಕೆಲಸವರಿಗೆ ಮರು ದಿನ ಕರೆದುಕೊಂಡು ಹೋಗಿರುವುದೂ ಉಂಟು. ಕೆಲವೊಮ್ಮೆ ತಡವಾಗಿ ಬಂದ ಆಂಬ್ಯುಲೆನ್ಸ್ ಸಿಬ್ಬಂದಿಗೆ ಸೋಂಕಿತ ವ್ಯಕ್ತಿಯನ್ನು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂಬ ಮಾಹಿತಿಯೂ ಇರುವುದಿಲ್ಲ. ನಂತರ ಆಸ್ಪತ್ರೆಗಳಿಗೆ ಕರೆ ಮಾಡಿ ವಿಚಾರಿಸುತ್ತಾರೆ. ಕೆಲವೊಮ್ಮೆ ಹಾಸಿಗೆ ಲಭ್ಯವಿಲ್ಲದೆ ಸೋಂಕಿತರನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿರುವ ಘಟನೆಗಳೂ ನಡೆದಿವೆ. ಅಷ್ಟರಲ್ಲಿ ರೋಗಿ ಮಾನಸಿಕವಾಗಿಯೂ ಬಳಲಿರುತ್ತಾನೆ. ಜತೆಗೆ ಆತ ಮೊದಲೇ ಅನಾರೋಗ್ಯ ಸಮಸ್ಯೆ ಹೊಂದಿದ್ದರೆ ಆಸ್ಪತ್ರೆ ಸೇರುವಷ್ಟರಲ್ಲಿ ಗಂಭೀರ ಹಂತ ತಲುಪಿರುತ್ತಾನೆ. ಇಂತಹ ಬಹಳಷ್ಟು ಘಟನೆಗಳು ನಡೆದಿವೆ.
ಇದನ್ನೂ ಓದಿ: ಅಶೋಕ್ ಕರೊನಾ ಉಸ್ತುವಾರಿ ತಾತ್ಕಾಲಿಕ?
ಸಭೆಯಲ್ಲೇ ಕಾಲಹರಣ?: ಅಧಿಕಾರಿಗಳು ನಿತ್ಯ ಸಭೆ ಹೆಸರು ಹೇಳಿಕೊಂಡೇ ಕಾಲಹರಣ ಮಾಡುತ್ತ ಕಾರ್ಯಕ್ಷೇತ್ರಗಳಿಗೆ ಹೋಗದಿರುವುದು ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ. ಮತ್ತೊಂದೆಡೆ ಸಿಬ್ಬಂದಿಯ ಕೊರತೆ. ಇದರಿಂದಾಗಿ ಸೋಂಕು ಹರಡುವಿಕೆ ಕುರಿತು ತಳ್ಳಮಟ್ಟದ ಮಾಹಿತಿ ಸರಿಯಾಗಿ ದೊರೆಯುತ್ತಿಲ್ಲ. ಹೀಗಾಗಿ ಸೋಂಕಿನ ಕಾರಣ ಪತ್ತೆ ಹಚ್ಚಲು ಸಾಧ್ಯವಾಗದೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ಸೀಲ್ಡೌನ್ ಪ್ರಕ್ರಿಯೆಯೂ ವಿಳಂಬ: ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿರುವ ಕುಟುಂಬದ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸುವುದು ಸಹ ವಿಳಂಬವಾಗುತ್ತಿದೆ. ಅಷ್ಟೇ ಅಲ್ಲದೆ ಸೋಂಕಿತ ವ್ಯಕ್ತಿಯ ಮನೆ ಸೀಲ್ ಡೌನ್ ಮಾಡುವುದು ಸಹ 4-5 ದಿನಗಳಾಗುತ್ತಿದೆ. ಅಷ್ಟರಲ್ಲಿ ಮನೆಯವರ ಕ್ವಾರಂಟೈನ್ ಅವಧಿ ಅರ್ಧ ಮುಗಿದೇ ಹೋಗಿರುತ್ತದೆ. ಆದರೆ ಈ ರೀತಿಯ ವಿಳಂಬದಿಂದ ಸೋಂಕಿತರ ನೆರೆ ಹೊರೆಯವರಲ್ಲಿ ಆತಂಕ ಮೂಡಿಸಿದೆ.