

ಬೆಂಗಳೂರು: ರಾಜ್ಯದಲ್ಲಿ ಕರೊನಾ COVID19 ಸೋಂಕುಪೀಡಿತರ ಸಂಖ್ಯೆ 900ರ ಗಡಿ ದಾಟಿದೆ. ಮಂಗಳವಾರ ಹೊಸದಾಗಿ 42 ಪ್ರಕರಣಗಳು ದೃಢವಾಗಿದ್ದು, ಒಟ್ಟು ಸಂಚಿತ ಖಚಿತ ಪ್ರಕರಣಗಳ ಸಂಖ್ಯೆ 904ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ 31 ಪ್ರಕರಣಗಳಲ್ಲಿ ರೋಗಿಗಳು ಮೃತಪಟ್ಟಿದ್ದಾರೆ.
ಇದಲ್ಲದೆ, ಒಂದು ಸಾವು ಕೋವಿಡ್ 19 ರ ಹೊರತಾದ ಕಾರಣಕ್ಕೆ ಸಂಭವಿಸಿದೆ. 426 ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸ ಪ್ರಕರಣಗಳು ನಿನ್ನೆ ಸಂಜೆ 5ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ನಡುವೆ ದೃಢಪಟ್ಟಿರುವುದಾಗಿದೆ.
ಇಂದು ದೃಢಪಟ್ಟಿರುವ 42 ಪ್ರಕರಣಗಳ ಪೈಕಿ 14 ಪ್ರಕರಣ ಬಾಗಲಕೋಟೆಯಲ್ಲೂ, ಹುಬ್ಬಳ್ಳಿ 9, ಹಾಸನ 5, ದಕ್ಷಿಣ ಕನ್ನಡ 3, ಬೆಂಗಳೂರು 3, ಬೀದರ್ 2, ಯಾದಗಿರಿ 2, ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ, ಮಂಡ್ಯಗಳಲ್ಲಿ ತಲಾ ಒಂದು ಪ್ರಕರಣಗಳು ಸೇರಿಕೊಂಡಿವೆ. ಹಾಸನ ಹಸಿರು ವಲಯದಲ್ಲಿದ್ದು, ಅಲ್ಲಿ ಒಂದೇ ದಿನ 5 ಪ್ರಕರಣ ದಾಖಲಾಗಿ ಕಳವಳ ಮೂಡಿಸಿದೆ. ಉಳಿದ ವಿವರಗಳಿಗಾಗಿ ಪಟ್ಟಿಯನ್ನು ಗಮನಿಸಿ..