ದಂಪತಿ ಸಮೇತ ನಾಲ್ವರು ಕಳ್ಳರ ಬಂಧನ

FotoJet (1)
Published on

10ರಂದು ಗೌರಿಬಿದನೂರಿನಲ್ಲಿ ಕೃತ್ಯ 412 ಗ್ರಾಂ ಬಂಗಾರ, 2 ಕೆಜಿ ಬೆಳ್ಳಿ ಸೇರಿ ಒಟ್ಟು 35.14 ಲಕ್ಷ ರೂ. ಮೌಲ್ಯದ ವಸ್ತುಗಳು ವಶ

ಚಿಕ್ಕಬಳ್ಳಾಪುರ: ಗೌರಿಬಿದನೂರು ತ್ಯಾಗರಾಜ ಕಾಲನಿಯಲ್ಲಿನ ಮನೆಯಲ್ಲಿ ನಗದು, ಚಿನ್ನಾಭರಣ ಕದ್ದವರನ್ನು ಮಾಲು ಸಮೇತ ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ತಾಲೂಕಿನ ಮಾದಪಟ್ಟಣದ ಕಾರದಪುಡಿ ನೂರುಲ್ಲಾ (50), ಈತನ ಹೆಂಡತಿ ಹಮೀನಾ ಬೀ, ಹಾರೋಗದ್ದೆಯ ವಿನೋದ್ ಮಾರ್ಕಕರ್ ಹಾಗೂ ಸಾಗರ್ ಬಂಧಿತರು. ಆರೋಪಿಗಳಿಂದ 412 ಗ್ರಾಂ ಬಂಗಾರ, 2 ಕೆಜಿ ಬೆಳ್ಳಿ, 2 ವಾಚ್, ನಗದು ಸೇರಿ 35,14,460 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕರು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಒಡವೆ, ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕಿನ ಲಾಕರ್‌ನಲ್ಲಿ ಸುರಕ್ಷಿತವಾಗಿಡಬೇಕು. ಮನೆಯಲ್ಲಿ ಸುರಕ್ಷತೆಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ನಿಯಮಾನುಸಾರ ಇತ್ಯರ್ಥಪಡಿಸಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಲಾಗುತ್ತಿದೆ. ಇದರಲ್ಲಿ ಪೂರ್ಣ ಯಶಸ್ವಿಗೆ ಜನರ ಸಹಕಾರವೂ ಅಗತ್ಯ ಎಂದರು.

ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವ ಜತೆಗೆ ಅಪರಾಧ ಚಟುವಟಿಕೆ ಬಗ್ಗೆ ಅರಿವಿಗೆ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಗೌರಿಬಿದನೂರು ನಗರದ ತ್ಯಾಗರಾಜ ಕಾಲನಿಯಲ್ಲಿನ ಮನೆಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಮಾಲು ಸಮೇತ ವಶಪಡಿಸಿಕೊಂಡ ಸಿಬ್ಬಂದಿ ಕೆಲಸ ಶ್ಲಾಘನೀಯ. ಅದರಲ್ಲೂ ತನಿಖೆ ವೇಳೆ ಸಂಭವಿಸಿದ ವಾಹನದ ಅಪಘಾತದಲ್ಲಿ ಗಾಯಗೊಂಡರೂ ಪೊಲೀಸರು ಕರ್ತವ್ಯ ನಿರ್ವಹಿಸಿ, ಜವಾಬ್ದಾರಿ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖಾಕಿ ಪಡೆಗೆ ಅಪಘಾತ

ಗೌರಿಬಿದನೂರು ನಗರ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಸುತ್ತಲಿನ ಸಿಸಿ ಕ್ಯಾಮರಾ, ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ನಡುವೆ ಆರೋಪಿಗಳ ಪತ್ತೆಗಾಗಿ ಬೆಂಗಳೂರಿಗೆ ಖಾಸಗಿ ಕಾರಿನಲ್ಲಿ ಹೋಗುತ್ತಿದ್ದಾಗ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸಮೀಪ ವಾಹನ ಪಲ್ಟಿಯಾಗಿ ಸಿಬ್ಬಂದಿ ಗಾಯಗೊಂಡಿದ್ದರು. ಆದರೂ ವಿಶ್ರಾಂತಿ ಪಡೆಯದೇ ಕಾರ್ಯಾಚರಣೆ ಕೈಗೊಂಡಿದ್ದರು.

ಕಳ್ಳತನ ಪ್ರಕರಣ

ಜ.10ರಂದು ಗೌರಿಬಿದನೂರು ನಗರದ ತ್ಯಾಗರಾಜ ಕಾಲನಿಯಲ್ಲಿನ ಅಶ್ವತ್ಥನಾರಾಯಣ ಶೆಟ್ಟಿ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದು, ಅಂದು ರಾತ್ರಿ ಕಳ್ಳರು ಬೀಗ ಒಡೆದು, ಕಪಾಟಿನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಇದರ ಬಗ್ಗೆ ಮಾಲೀಕರು ದೂರು ದಾಖಲಿಸಿದ್ದು, ಪ್ರಕರಣ ಭೇದಿಸಲು ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಸತ್ಯನಾರಾಯಣ, ಉಪ ನಿರೀಕ್ಷಕ ಚಂದ್ರಕಲಾ, ಗೋಪಾಲ, ರಮೇಶ್ ಗುಗ್ಗುರಿ, ಪ್ರಭಾಕರ್, ಸಿಬ್ಬಂದಿ ಶ್ರೀರಾಮಯ್ಯ, ರಿಜ್ವಾನ್, ಶ್ರೀನಿವಾಸರೆಡ್ಡಿ, ಅಶ್ವತ್ಥ್, ಶಿವಶೇಖರ್, ಮಹಾಂತೇಶ್, ಮರುಳು ಸಿದ್ದೇಶ್ವರ, ರವಿಕುಮಾರ್, ಮುನಿಕೃಷ್ಣ ಅವರನ್ನೊಳಗೊಂಡ ತಂಡವನ್ನು ತನಿಖೆಗೆ ರಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net