ಯತ್ತಿನಹಳ್ಳಿಯಲ್ಲಿ ಜೋಡಿ ಕೊಲೆ

17-hvr-03 ningappa shirguppi
Published on

ಹಾವೇರಿ: ಡಂಬಲ್ಸ್​ಗಳಿಂದ ಹೊಡೆದು ಯುವಕ ಹಾಗೂ ಬಾಲಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ಸಮೀಪದ ಯತ್ತಿನಹಳ್ಳಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಕೊಲೆಗೀಡಾದವರನ್ನು ಹಾವೇರಿ ನಿವಾಸಿಗಳಾದ ನಿಂಗಪ್ಪ ಬೆಣ್ಣೆಪ್ಪ ಶಿರಗುಪ್ಪಿ (28) ಹಾಗೂ ಬಾಲಕ ಗಣೇಶ ದಿನೇಶ ಕುಂದಾಪುರ (16) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಹಾವೇರಿ ಶಹರ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗೆ ನಗರದಲ್ಲಿ 11 ವರ್ಷದ ಬಾಲಕನ ಕೊಲೆ ಘಟನೆ ಮಾಸುವ ಮುನ್ನ ಜೋಡಿ ಕೊಲೆಯಾಗಿದ್ದು, ಜನ ಬೆಚ್ಚಿಬೀಳುವಂತೆ ಮಾಡಿದೆ.

ಘಟನೆಯ ವಿವರ: ಯತ್ತಿನಹಳ್ಳಿಯ ಕಾಂಪ್ಲೆಕ್ಸ್​ನಲ್ಲಿ ನಿಂಗಪ್ಪ ಹಾಗೂ ಗಣೇಶ ನಿತ್ಯ ರಾತ್ರಿ ಮಲಗುತ್ತಿದ್ದರು. ಬೆಳಗ್ಗೆ ಎದ್ದು ಅಲ್ಲಿಯೇ ವ್ಯಾಯಾಮ ಮಾಡುತ್ತಿದ್ದರು. ಬೆಳಗ್ಗೆ ಎಂದಿನಂತೆ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಬಾಗಿಲು ತೆರೆದು ನೋಡಿದ್ದಾರೆ. ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ವಾನವು ಘಟನಾ ಸ್ಥಳದಿಂದ ಸ್ವಲ್ಪ ದೂರ ಹೋಗಿ ಮರಳಿಬಂದಿದೆ.

ಸ್ಥಳಕ್ಕೆ ಎಸ್​ಪಿ ಕೆ.ಜಿ. ದೇವರಾಜ್, ಡಿವೈಎಸ್​ಪಿ ವಿಜಯಕುಮಾರ ಸಂತೋಷ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಶಹರ ಠಾಣೆ ಸಿಪಿಐ ಪ್ರಹ್ಲಾದ ಚನ್ನಗಿರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುದ್ದಿ ತಿಳಿದು ಹಾವೇರಿಯಿಂದ ನೂರಾರು ಜನರು ಯತ್ತಿನಹಳ್ಳಿಗೆ ಆಗಮಿಸಿದ್ದರು. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಜೋಡಿ ಕೊಲೆ ಆರೋಪಿಗಳ ಪತ್ತೆಗೆ ಜಾಲ ಬೀಸಿರುವ ಪೊಲೀಸರು ಮೃತರ ಸಂಬಂಧಿಕರಿಂದ ಕೆಲ ಮಾಹಿತಿ ಸಂಗ್ರಹಿಸಿದ್ದಾರೆ. ಜತೆಗೆ ನಾಲ್ಕೈದು ಜನರನ್ನು ಠಾಣೆಗೆ ಕರೆತಂದು ವಿಚಾರಣೆಯನ್ನೂ ನಡೆಸಿದ್ದಾರೆ.

ನಿಂಗಪ್ಪನನ್ನು ಬಿಟ್ಟಿರದ ಗಣೇಶ: ನಿಂಗಪ್ಪನ ಮೇಲಿನ ದ್ವೇಷದಿಂದ ದುಷ್ಕರ್ವಿುಗಳು ಹತ್ಯೆ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಸಂಬಂಧವಿಲ್ಲದ ಬಾಲಕ ಗಣೇಶ ಬಲಿಯಾಗಿದ್ದಾನೆ ಎನ್ನಲಾಗಿದೆ. ಗಣೇಶ ಹಾಗೂ ನಿಂಗಪ್ಪ ಒಂದೇ ಏರಿಯಾದಲ್ಲಿದ್ದರು. ನಿಂಗಪ್ಪನೊಂದಿಗೆ ಅತಿಯಾದ ಸಲುಗೆ ಹೊಂದಿದ್ದ ಗಣೇಶ, ಸದಾ ಆತನೊಂದಿಗಿರುತ್ತಿದ್ದ. ಊಟ, ತಿಂಡಿ ಎಲ್ಲವನ್ನೂ ನಿಂಗಪ್ಪನೇ ಮಾಡಿಸುತ್ತಿದ್ದ. ಮಂಗಳವಾರ ರಾತ್ರಿಯೂ ಎಂದಿನಂತೆ ನಿಂಗಪ್ಪನ ಜತೆಗೆ ಗಣೇಶ ಹೋಗಿದ್ದಾನೆ. ನಿಂಗಪ್ಪನನ್ನು ಕೊಲೆ ಮಾಡಿದ್ದನ್ನು ಪೊಲೀಸರಿಗೆ ತಿಳಿಸುತ್ತಾನೆ ಎಂದು ಹೆದರಿ ದುಷ್ಕರ್ವಿುಗಳು ಬಾಲಕನನ್ನೂ ಹತ್ಯೆಗೈದಿರಬಹುದು ಎಂಬ ಮಾತುಗಳು ಸ್ಥಳದಲ್ಲಿ ಕೇಳಿಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net