

ಹಾಸನ: ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ತಾವೇ ಚೆಲ್ಲಾಪಿಲ್ಲಿ ಆಗಿಸಿ, ಬಳಿಕ ಮನೆಯಲ್ಲಿ ಕಳ್ಳತನವಾಗಿದೆ ಎಂದು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಹಾಸನ ಜಿಲ್ಲೆ ಬೇಲೂರು ಪಟ್ಟಣದ ಗುರಪ್ಪಗೌಡರ ಬೀದಿಯಲ್ಲಿನ ನಿವಾಸಿಗಳಾದ ಕಲ್ಲೇಶ್ ಆಚಾರ್ ಮತ್ತು ಮಮತಾ ದಂಪತಿ ಪೊಲೀಸರಿಗೆ ಈ ಸುಳ್ಳು ದೂರನ್ನು ನೀಡಿದ್ದರು. ಅಷ್ಟೇ ಅಲ್ಲದೆ ಕಳವಾದ ಬಗ್ಗೆ ಮಮತಾ ರಸವತ್ತಾದ ಕಥೆಯನ್ನೇ ಹೇಳಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಅಸಲಿಯತ್ತು ಬೆಳಕಿಗೆ ಬಂದಿದೆ.
ಈ ದಂಪತಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲಾಗದೆ ಹೆದರಿ ಇಂಥದ್ದೊಂದು ಕಥೆ ಕಟ್ಟಿದ್ದಾರೆ. ತನಿಖೆಯಲ್ಲಿ ಅಸಲಿ ವಿಷಯ ಹೊರಬರುತ್ತಿದ್ದಂತೆ ಗಂಡ-ಹೆಂಡತಿ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು, ಪೊಲೀಸರಿಗೇ ಸುಳ್ಳು ಹೇಳಿದ್ದಕ್ಕೆ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.