ಸಾವಿನಲ್ಲೂ ಒಂದಾದ ವೃದ್ಧ ದಂಪತಿ

06 RTL PARWATAMMA GUBBI
Published on

ರಟ್ಟಿಹಳ್ಳಿ: ತಾಲೂಕಿನ ನಾಗವಂದ ಗ್ರಾಮದಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಗ್ರಾಮದ ನಿವಾಸಿ ರುದ್ರಪ್ಪ ಗುಬ್ಬಿ (75) ಮತ್ತು ಪಾರ್ವತಮ್ಮ ಗುಬ್ಬಿ (70) ಮೃತ ದಂಪತಿ. ಇವರು ಜೀವನದುದ್ದಕ್ಕೂ ಯಾವುದೇ ಕೆಲಸ ಕಾರ್ಯಗಳಿರಲಿ ಜೊತೆಯಾಗಿಯೇ ಮಾಡುತ್ತಿದ್ದರು. ಪ್ರತಿಯೊಂದರಲ್ಲೂ ಅನ್ಯೋನ್ಯವಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದರು ಎಂದು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಭಾನುವಾರ ರಾತ್ರಿ ಇಬ್ಬರೂ ಮನೆಗೆ ಅಗತ್ಯ ನೀರನ್ನು ಸಂಗ್ರಹಿಸಿದ್ದಾರೆ. ಬಳಿಕ ಜೊತೆಯಲ್ಲಿ ಕುಳಿತು ಊಟ ಮಾಡಿ ಮಲಗಿದ್ದಾರೆ. ಪ್ರತಿ ದಿವಸ ಬೆಳಗ್ಗೆ ದಂಪತಿ ಬೇಗ ಎದ್ದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಸೋಮವಾರ ಬೆಳಗ್ಗೆ 6 ಗಂಟೆಯಾದರೂ ಇಬ್ಬರೂ ಹೊರಗೆ ಬಾರದ ಕಾರಣ ಕುಟುಂಬದ ಇತರ ಸದಸ್ಯರು ಎಬ್ಬಿಸಲು ಮುಂದಾಗಿದ್ದಾರೆ. ಆದರೆ, ಎರಡೂ ಹಿರಿಜೀವಗಳು ಸಹಜ ಸಾವು ಕಂಡಿರುವುದು ಬೆಳಕಿಗೆ ಬಂದಿದೆ. ಇದು ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಒಂದೇ ರಾತ್ರಿಯಲ್ಲಿ ಇಬ್ಬರೂ ಮೃತಪಟ್ಟಿರುವುದು ಆಶ್ಚರ್ಯ ಮೂಡಿಸಿದೆ.

ದಂಪತಿಗೆ ಪುತ್ರಿ, ಮೂವರು ಪುತ್ರರಿದ್ದಾರೆ. ಎರಡು ದೇಹ ಒಂದೇ ಹೃದಯ ಎಂಬಂತಿದ್ದ ದಂಪತಿಗೆ ಭಗವಂತ ಚಿರ ಶಾಂತಿ ನೀಡಲಿ ಎಂದು ಗ್ರಾಮಸ್ಥರು ಹಾರೈಸುತ್ತಿದ್ದಾರೆ.

ನಮ್ಮ ತಂದೆ ಮತ್ತು ತಾಯಿ ಜೊತೆಯಾಗಿಯೇ ಇರುತ್ತಿದ್ದರು. ಅನ್ಯೋನ್ಯತೆಯಿಂದ ಬದುಕಿ ಮಾದರಿಯಾಗಿದ್ದರು. ಯಾವುದೇ ಕೆಲಸ ಕಾರ್ಯಗಳಿರಲಿ ಇಬ್ಬರೂ ಜೊತೆಯಾಗೇ ಹೋಗುತ್ತಿದ್ದರು. ಸಾವಿನಲ್ಲೂ ಭಗವಂತ ಇಬ್ಬರನ್ನೂ ಜೊತೆಯಾಗಿಯೇ ಕರೆಸಿಕೊಂಡಿದ್ದಾನೆ. ಇಬ್ಬರ ಶವಸಂಸ್ಕಾರವನ್ನು ರುದ್ರಭೂಮಿಯಲ್ಲಿ ಅಕ್ಕಪಕ್ಕದಲ್ಲಿಯೇ ಮಾಡಲಾಗುವುದು.| ಬಸನಗೌಡ ಗುಬ್ಬಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net