ಹಾಸನಾಂಬ ಜಾತ್ರೆಗೆ ದಿನಗಣನೆ

ಹಾಸನಾಂಬ ಜಾತ್ರೆಗೆ ದಿನಗಣನೆ
Published on

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಹಿಂದಿಗಿಂತ ಈ ಬಾರಿ ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ.

ಈ ಬಾರಿ ದೇವಿ ದರ್ಶನದ ಜತೆಗೆ ವಿಶೇಷವಾಗಿ ಟೂರ್ ಪ್ಯಾಕೇಜ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಅ.9 ರಂದು ಹಾಸನಾಂಬ ದೇಗುಲದ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದ್ದು, ಅ.23 ರಂದು ದೇವಾಲಯದ ಬಾಗಿಲು ಮುಚ್ಚಲಿದೆ. ಭಕ್ತರಿಗೆ ಮೊದಲ ದಿನ ಮತ್ತು ಕೊನೆಯ ದಿನ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಎಲ್ಲಾ ದಿನ ನೈವೇದ್ಯ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಹಾಸನಾಂಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಕೃಷ್ಣಬೈರೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಪೂರ್ವಭಾವಿ ಸಭೆ ನಡೆಸಿದ್ದಾರೆ. ಅಗತ್ಯ ಪೂರ್ವ ತಯಾರಿಯೊಂದಿಗೆ ಜಿಲ್ಲಾಡಳಿತ ಭರದಿಂದ ಸಿದ್ಧತೆ ನಡೆಸಿದೆ. ಈಗಾಗಲೇ ದೇವಸ್ಥಾನಕ್ಕೆ ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡಿದೆ. ಆಹ್ವಾನ ಪತ್ರಿಕೆಗಳ ಹಂಚಿಕೆ ಕಾರ್ಯವೂ ನಡೆಯುತ್ತಿದೆ. ಹಾಸನ ನಗರದ ಹಲವೆಡೆ ಸ್ವಾಗತ ಕಮಾನು, ಇಡೀ ನಗರದಾದ್ಯಂತ ಲೈಟಿಂಗ್, ಎಲ್‌ಇಡಿ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವ ಕಾರ್ಯ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಬ್ಯಾರಿಕೇಡ್, ಮ್ಯಾಟ್ ಅಳವಡಿಕೆ ಸೇರಿದಂತೆ ಬರುವ ಭಕ್ತರಿಗೆ ವಿವಿಧ ರೀತಿಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಗೋಲ್ಡ್ ಪಾಸ್ ವ್ಯವಸ್ಥೆ: ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ಬಾರಿ ಇನ್ನೂ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ನೂಕುನುಗ್ಗಲು ಆಗದಂತೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ. ವಿಶೇಷ ದರ್ಶನಕ್ಕೆ ಬರುವಂತಹ ಭಕ್ತರಿಗೆ 300 ರೂ ಹಾಗೂ 1,000 ರೂ. ಬೆಲೆಯ ಟಿಕೆಟ್

ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಿದ್ದು, ಗೋಲ್ಡ್ ಪಾಸ್ ಜಾರಿಗೆ ತರಲಾಗಿದೆ. ಒಂದು ಪಾಸ್‌ಗೆ ಒಬ್ಬರಿಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ. ದಿನದಲ್ಲಿ ಎರಡು ಗಂಟೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದರ್ಶನಕ್ಕೆ ಬರುವಂತಹ ವೃದ್ಧರು ಮತ್ತು ಅಂಗವಿಕಲರನ್ನು ದೇವರ ದರ್ಶನಕ್ಕೆ ಕರೆದುಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಸುಗಮ ದರ್ಶನಕ್ಕಾಗಿ ಜನದಟ್ಟಣೆ ಉಂಟಾಗುವುದನ್ನು ತಪ್ಪಿಸಲು ದೇವಾಲಯದಿಂದ ಬ್ಯಾರಿಕೇಡ್ ವ್ಯವಸ್ಥೆ, ಜರ್ಮನ್ ಟೆಂಟ್, ನೆಲಕ್ಕೆ ಮ್ಯಾಟ್, 100 ಕ್ಕೂ ಹೆಚ್ಚು ಶೌಚಗೃಹ ಅಳವಡಿಕೆ ಕಾರ್ಯ ನಡೆಯುತ್ತಿದೆ. ಬೆಂಗಳೂರು ಹಾಗೂ ಮೈಸೂರಿನಿಂದ ಬರುವ ಭಕ್ತರಿಗೆ ದೇವಿ ದರ್ಶನದ ಜತೆಗೆ ಟೂರಿಸಂ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದೆ.

ವಾಟ್ಸಾಪ್ ಚಾಟ್ ಬಾಟ್ ಮೂಲಕ ಆನ್‌ಲೈನ್ ನೆರವು

ಹಾಸನದ ಅಧಿದೇವತೆ ಹಾಸನಾಂಬೆ ದರ್ಶನೋತ್ಸವಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಆನ್‌ಲೈನ್ ಸೇವೆ ಕೊಡುಗೆ ನೀಡಲಾಗಿದೆ. ವಾಟ್ಸಾಪ್ ಚಾಟ್ ಬಾಟ್ ಮೂಲಕ ಭಕ್ತರಿಗೆ ಆನ್‌ಲೈನ್ ನೆರವು, ಟಿಕೆಟ್ ಬುಕಿಂಗ್, ದರ್ಶನ ಸಮಯ, ಸರತಿ ಸಾಲುಗಳ ಸ್ಥಿತಿಗತಿ, ಈ ಹುಂಡಿ ಸೇರಿ ಹಲವು ಮಾಹಿತಿಗಳು ಬೆರಳ ತುದಿಯಲ್ಲೇ ಲಭ್ಯವಾಗುವಂತೆ ಮಾಡಲಾಗಿದೆ. ದರ್ಶನ ಪಡೆಯಬಯಸುವವರು

63661 05589 ನಂಬರ್‌ಗೆ ಮೆಸೇಜ್ ಮಾಡಿದರೆ ಎಲ್ಲಾ ಮಾಹಿತಿ ದೊರಕಲಿದೆ. ಎಐ ತಂತ್ರಜ್ಞಾನದ ಮೂಲಕ ಭಕ್ತರಿಗೆ ಅತ್ಯಾಧುನಿಕ ಸೇವೆ ನೀಡಲು ಹಾಸನಾಂಬೆ ದೇವಾಲಯ ಆಡಳಿತ ಮಂಡಳಿ ನಿರ್ಧರಿಸಿದೆ.

ನಂಬರ್ ಸೇವ್ ಮಾಡಿಕೊಂಡು ಹಾಯ್ ಎಂದು ಮೆಸೇಜ್ ಮಾಡಿದರೆ ಎಲ್ಲಾ ರೀತಿಯ ಮಾಹಿತಿ ಲಭ್ಯವಾಗಲಿದೆ. ಹಾಸನಾಂಬೆ ದೇವಾಲಯದ ಬಗ್ಗೆ ಬೇಕಾದ ವಿವರ ನೀಡಲಿರುವ ಚಾಟ್ ಬಾಟ್ ಆ್ಯಪ್ ಯಾವ್ಯಾವ ದಿನ ಎಷ್ಟು ಗಂಟೆಗೆ ದೇವಿ ದರ್ಶನ ದೊರಕಲಿದೆ ಎನ್ನುವುದನ್ನೂ ಕುಳಿತಲ್ಲೇ ತಿಳಿಯಲು ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net