

ಕನಕಗಿರಿ: ವೈಜ್ಞಾನಿಕ ದರದಲ್ಲಿ ರೈತರಿಗೆ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಸರಬರಾಜಾಗುವಂತೆ ಕೃಷಿ ಇಲಾಖೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಲಾಯಿತು.
ಪೂರ್ವ ಮುಂಗಾರಿನಲ್ಲಿ ನೀರಾವರಿ ರೈತರು ಈಗಾಗಲೇ ಬಿತ್ತನೆ ಮಾಡುತ್ತಿದ್ದಾರೆ. ಆದರೆ, ಕೃಷಿ ಇಲಾಖೆ ಸೂರ್ಯಕಾಂತಿ ಮತ್ತು ಹತ್ತಿ ಬೀಜ ಸರಬರಾಜು ಮಾಡಿಲ್ಲ. ತಾಲೂಕಿನ ಭಾಗದಲ್ಲಿ ಹೆಚ್ಚು ಬೀಜೋತ್ಪಾದನಾ ಮಾಡುವ ರೈತರು ಇದ್ದರೂ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಹತ್ತಿ ಬೆಳೆಯನ್ನು ವಿಮೆ ವ್ಯಾಪ್ತಿಗೆ ಸೇರಿಸದಿರುವುದು ಬೇಸರ ತರಿಸಿದೆ.
ಹತ್ತಿ ಬೆಳೆಯನ್ನು ವಿಮಾ ವ್ಯಾಪ್ತಿಗೆ ಹಾಗೂ ಕನಕಗಿರಿ ಭಾಗದ ಪ್ರಮುಖ ಬೆಳೆಯನ್ನಾಗಿ ಸೇರ್ಪಡೆಗೊಳಿಸಬೇಕು. ತಾಲೂಕಿನಾದ್ಯಂತ ರೈತರಿಗೆ ನಿಗದಿತ ದರದಲ್ಲಿ ರಾಸಾಯನಿಕ ಗೊಬ್ಬರ ದೊರೆಯುವಂತೆ ಕ್ರಮ ವಹಿಸಬೇಕು. ಪೂರ್ವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ನೀರಾವರಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜಿಲ್ಲದೆ ಸಮಸ್ಯೆಯಾಗುತ್ತಿದೆ. ಮುಂಗಾರು ಹಂಗಾಮಿಗೆ ಅಗತ್ಯವಾಗಿರುವ ಹೆಸರು, ಸಜ್ಜೆ, ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ ಇತರೆ ಬೀಜಗಳನ್ನು ತ್ವರಿತಗತಿಯಲ್ಲಿ ಸರಬರಾಜು ಆಗುವಂತೆ ಕ್ರಮ ವಹಿಸಲು ಸೂಚಿಸಬೇಕು ಎಂದು ಆಗ್ರಹಿಸಿದರು.
ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಗದ್ದಿ, ತಾಲೂಕು ಅಧ್ಯಕ್ಷ ಭೀಮನಗೌಡ ಜೀರಾಳ ಶಿವಕುಮಾರ್ ಬಡಿಗೇರ್, ಪ್ರಮುಖರಾದ ವೆಂಕಟೇಶ್ ಮಲ್ಲಿಗೆವಾಡ, ಬಾಲಪ್ಪ ನಾಡಿಗೇರ್, ಜಡಿಯಪ್ಪ ನಿರಲೂಟಿ, ಹನುಮೇಶ ಪೂಜಾರಿ, ಹನುಮಂತಪ್ಪ ಬಂಡ್ರಾಳ, ಸಣ್ಣ ಶೇಖರಪ್ಪ ಗದ್ದಿ, ಸೋಮನಾಥ ನಾಯಕ್ ಇತರರಿದ್ದರು.