

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಬೇಸರ ವ್ಯಕ್ತಪಡಿಸಿದರು.
ನಗರ ಪಾಲಿಕೆ ಆವರಣದಲ್ಲಿ ಶನಿವಾರ ಅಕ್ಕ ಕೆಫೆ, ಪಾಲಿಕೆ ಸಭಾಂಗಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇ -ಖಾತೆ, ಬಿ ಖಾತಾ ಮಾಡಲು ಜನರ ಬಳಿ ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಯಾವುದೇ ಅಧಿಕಾರಿ ಮೇಲಾಗಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ಅಧಿಕಾರಿಗಳಿರುವುದು ಜನರ ಸೇವೆ ಮಾಡಲು. ಅದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕೇ ಹೊರತು ಲಂಚ ತೆಗೆದುಕೊಳ್ಳುವುದಲ್ಲ ಎಂದು ಎಚ್ಚರಿಕೆ ನೀಡಿದರು.
ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮತ್ತಿತರರು ಇದ್ದರು.
ಬೋಕ್ರರ್ಗಳಿಗೆ ಬ್ರೇಕ್ ಹಾಕಬೇಕು
ಪಾಲಿಕೆಯು ಅಧಿಕಾರಿಗಳ ಆವರಣ ಆಗಬೇಕೆ ಹೊರತು, ಬ್ರೋಕರ್ಗಳ ಆವರಣ ಆಗಬಾರದು. ಅಧಿಕಾರಿಗಳು ಜನರನ್ನು ಅಲೆದಾಡಿಸುವುದನ್ನು ಬಿಟ್ಟು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜನಸ್ನೇಹಿಯಾಗಿ ಕೆಲಸ ಮಾಡುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಚಿವರ ಮುಂದೆಯೇ ಪಾಲಿಕೆ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.