

ಗೋಣಿಕೊಪ್ಪ: ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭವಾಗುತ್ತದೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಬಸವರಾಜು ಹೇಳಿದರು.
ಕಾವೇರಿ ಪದವಿ ಕಾಲೇಜು ಗೋಣಿಕೊಪ್ಪಲು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆಂತರಿಕ ಭರವಸೆ ಕೋಶದ ಸಹಯೋಗದಲ್ಲಿ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳು ಅಳುವಾಗ ಅಥವಾ ಏನಾದರೂ ಕೆಲಸ ಮಾಡಿಸಿಕೊಳ್ಳಲು ಸಿಹಿ ಆಮಿಷ ಒಡ್ಡಿ ನಮಗೆ ಬೇಕಾದಂತೆ ಮಾಡಿಸಿಕೊಳ್ಳುತ್ತಾರೆ. ಮಕ್ಕಳು ಅಪ್ಪ-ಅಮ್ಮನಿಂದ ಲಂಚ ಪಡೆದರೆ, ಪಾಲಕರು ಮಕ್ಕಳಿಗೆ ಲಂಚ ಕೊಡುತ್ತ ಮನೆಯಿಂದಲೇ ಭ್ರಷ್ಟಾಚಾರ ಆರಂಭಿಸಲಾಗುತ್ತಿದೆ ಎಂದರು.
ತನ್ನ ಸ್ವಾರ್ಥ ಸಾಧನೆಗಾಗಿ ಹಣ ಕೊಟ್ಟು ನಮ್ಮ ಕೆಲಸ ಮಾಡಿಸಿಕೊಳ್ಳಲು ಮುಂದಾಗುತ್ತೇವೆ. ಲಂಚ ಕೊಡಲು ನಾವೇ ತಯಾರಿರುವಾಗ ಲಂಚ ಪಡೆಯುವವರು ನಮಗಿಂತ ಮುಂಚೂಣಿಯಲ್ಲಿ ಹಣ ಪಡೆಯಲು ತಯಾರಿರುತ್ತಾರೆ. ಇದರಿಂದ ಭ್ರಷ್ಟಾಚಾರ ಸಮಾಜದಲ್ಲಿ ಆಳವಾಗಿ ಬೇರರುವಂತಾಗಿದೆ ಎಂದರು.
ಲಂಚ ಕೊಟ್ಟು ಕೆಲಸ ತೆಗೆದುಕೊಂಡರೆ ಲಂಚ ಪಡೆದೇ ಸಾಲ ತೀರಿಸಬೇಕಾಗುತ್ತದೆ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರಿಗಳಾಗಿದ್ದಾರೆ. ಯುವ ಜನತೆ ಭ್ರಷ್ಟಾಚಾರ ತಡೆಗಟ್ಟಲು ಶ್ರಮಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ನಯನಾ ತಮ್ಮಯ್ಯ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಭ್ರಷ್ಟಾಚಾರದ ವಿರುದ್ಧ ಸ್ಥಳದಲ್ಲೇ ಖಂಡಿಸುವಂತಾಗಬೇಕು ಎಂದರು. ಎನ್‌ಎಸ್‌ಎಸ್ ಅಧಿಕಾರಿ ಎಂ.ಎನ್. ವನಿತ್ ಕುಮಾರ್, ಎನ್.ಪಿ.ರೀತಾ ಚನ್ನನಾಯಕ್ ಇದ್ದರು.