ವಿದ್ಯಾವಂತರಿಂದಲೇ ಭ್ರಷ್ಟಾಚಾರ ಹೆಚ್ಚಳ; ಸಂತೋಷ್​ ಹೆಗ್ಡೆ ಕಳವಳ

Santosh Hegde
Published on

ಬೆಂಗಳೂರು: ವಿದ್ಯಾವಂತರಿಂದಲೇ ಭ್ರಷ್ಟಾಚಾರ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್​. ಸಂತೋಷ್​ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿದ್ಯಾ ಗ್ರೂಪ್​ ಆಫ್​​ ಇನ್ಸ್​ಟಿಟ್ಯೂಷನ್​ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಯುವಸಮೂಹ ಹೋರಾಡುವಂತಾಗಬೇಕು ಎಂದರು.

ಇಂದಿನ ಸಮಾಜದಲ್ಲಿ ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸಸಲಾಗುತ್ತಿದೆ. ನೈತಿಕ ಮೌಲ್ಯಗಳಿಗೆ ಬೆಲೆ ನೀಡುವ ನೈಜ ಸಮಾಜ ನಿರ್ಮಾಣ ಪ್ರಸ್ತುತ ಕಾಲದ ಅಗತ್ಯವಾಗಿದೆ. ಭ್ರಷ್ಟಾಚಾರಿಗಳಿಗೆ ಕಾನೂನಿನ ಭಯ ಇಲ್ಲದಿರುವುದರಿಂದ ದುರಾಸೆಗೆ ಮದ್ದಿಲ್ಲ ಎಂಬಂತಾಗಿದೆ ಎಂದು ಹೇಳಿದರು.

ಶಿಕ್ಷಣ ತಜ್ಱ ಗುರುರಾಜ ಕರಜಗಿ ಮಾತನಾಡಿ, ಶಿಣ ಸಂಸ್ಥೆಗಳು ವಿದ್ಯೆಯ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಶಿಕ್ಷಣ ಕ್ಷೇತ್ರ ಅಗಾಧವಾಗಿ ಬೆಳವಣಿಗೆಯಾಗುತ್ತಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್​ಎಸ್​ಎಲ್​ಸಿ ಹಾಗೂ ದ್ವೀತಿಯ ಪಿಯುಸಿ ತರಗತಿಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್​, 'ವೃಕ್ಷಮಾತೆ' ಸಾಲುಮರದ ತಿಮ್ಮಕ್ಕ, ಡಾ.ನಾ.ಸೋಮೇಶ್ವರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜೇಗೌಡ, ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಪವನ್​ ಮಂಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net