ಶಾಲಾಭಿವೃದ್ಧಿ ಹೆಸರಲ್ಲಿ ಅವ್ಯವಹಾರ ಆರೋಪ

15-RNR-01
Published on

ರಾಣೆಬೆನ್ನೂರ: ಶಾಲೆಯ ಅಭಿವೃದ್ಧಿ ಕಾರ್ಯ ಮಾಡುವ ಹೆಸರಿನಲ್ಲಿ ಎಸ್​ಡಿಎಂಸಿ ಮಾಜಿ ಅಧ್ಯಕ್ಷರು ಶಾಲೆಯ ಕಾಂಪೌಂಡ್ ಗೋಡೆಯ ಕಲ್ಲು, ಹಂಚು ಮಾರಾಟ ಮಾಡಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಎಸ್​ಡಿಎಂಸಿ ನೂತನ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದ ಘಟನೆ ತಾಲೂಕಿನ ಕೂನಬೇವು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

ಶಾಲೆಯಲ್ಲಿ ನೂತನ ಎಸ್​ಡಿಎಂಸಿ ರಚನೆಯಾದ ಹಿನ್ನೆಲೆಯಲ್ಲಿ ಸೋಮವಾರ ಸದಸ್ಯರ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಎಸ್​ಡಿಎಂಸಿ ನೂತನ ಅಧ್ಯಕ್ಷ ಹನುಮಂತಪ್ಪ ಗೋಣೆಪ್ಪನವರ ಮಾತನಾಡಿ, ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಶಾಲೆಯ ಸುತ್ತಲೂ ನೂತನ ಕಾಂಪೌಂಡ್ ನಿರ್ವಿುಸಲಾಗಿದೆ. ಆದರೆ, ಹಳೇ ಕಾಂಪೌಂಡ್​ಗೆ ಇದ್ದ 200ರಷ್ಟು ಟ್ರ್ಯಾಕ್ಟರ್​ಗಳ ಕಲ್ಲುಗಳನ್ನು ಮಾರಾಟ ಮಾಡಲಾಗಿದೆ. ಜತೆಗೆ ಶಾಲೆಯ ಹಂಚು ತೆಗೆದು ತಗಡಿನ ಶೀಟ್ ಹಾಕಲಾಗಿದೆ. ಹಳೇ ಹಂಚುಗಳನ್ನು ಮಾರಾಟ ಮಾಡಲಾಗಿದೆ. ಆ ಹಣ ಎಲ್ಲಿದೆ ಎನ್ನುವ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಆ ನಂತರವೇ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇನೆ. ಇಲ್ಲವಾದರೆ ಮುಂದೆ ಜನರಿಗೆ ಉತ್ತರ ಕೊಡಲು ಆಗುವುದಿಲ್ಲ ಎಂದರು. ಇದೇ ವಿಷಯವಾಗಿ ಮಾಜಿ ಅಧ್ಯಕ್ಷ ಮುದಕನಗೌಡ ಪಾಟೀಲ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ನೂತನ ಅಧ್ಯಕ್ಷ ಹನುಮಂತಪ್ಪ ಸಭೆ ಬಿಟ್ಟು ಹೊರ ನಡೆದರು.

ಮಾಧ್ಯಮದವರೊಂದಿಗೆ ಮಾತನಾಡಿದ ಹನುಮಂತಪ್ಪ, ‘ಹಳೇ ಕಾಂಪೌಂಡ್ ತೆರವುಗೊಳಿಸಿ ಅದರಿಂದ ಬಂದ 200 ಟ್ರ್ಯಾಕ್ಟರ್​ನಷ್ಟು ಕಲ್ಲುಗಳನ್ನು ಮಾರಾಟ ಮಾಡಲಾಗಿದೆ. ನಾಲ್ಕೈದು ಸಾವಿರ ಹಂಚುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಆದರೆ, ಈ ಬಗ್ಗೆ ಎಸ್​ಡಿಎಂಸಿ ಠರಾವು ಪುಸ್ತಕದಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. ಆದ್ದರಿಂದ ಬಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಇಲ್ಲವಾದರೆ ಈ ಅಕ್ರಮದ ಬಗ್ಗೆ ತನಿಖೆ ನಡೆಸಲು ದೂರು ನೀಡುತ್ತೇನೆ’ ಎಂದರು.

ಮೈಕ್ ಸೆಟ್ ಮಾಯ!: ಶಾಲೆಗೆ ಗ್ರಾಮದ ಸಿಆರ್​ಪಿಎಫ್ ರಾಜು ಬಣಕಾರ ಎಂಬುವರು 15 ಸಾವಿರ ರೂಪಾಯಿ ಬೆಲೆಯ ಮೈಕ್ ಸೆಟ್ ದಾನ ಮಾಡಿದ್ದರು. ಕಳೆದ ಡಿಸೆಂಬರ್ ತಿಂಗಳಲ್ಲಿ ಶಾಲೆಯ ಕೊಠಡಿಯಲ್ಲಿಟ್ಟಿದ್ದ ಮೈಕ್​ಸೆಟ್ ಕಳ್ಳತನವಾಗಿದೆ. ಆದರೆ, ಕೊಠಡಿಯ ಬೀಗ ಹಾಕಿದ್ದು, ಹಾಗೆಯೇ ಇತ್ತು. ಒಳಗಿನ ಮೈಕ್​ಸೆಟ್ ಮಾತ್ರ ಕಳ್ಳತನ ಮಾಡಿದ್ದಾರೆ. ಇದು ಹೇಗೆ ಸಾಧ್ಯ. ಅಲ್ಲದೆ, ಮೈಕ್​ಸೆಟ್ ಕಳ್ಳತನವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿಲ್ಲ. ಹೀಗಾಗಿ ಮೈಕ್​ಸೆಟ್ ಕಳ್ಳತನ ಪ್ರಕರಣವು ಅನುಮಾನ ಮೂಡಿಸಿದೆ.

ಶಾಲೆಯ ಮೇಲ್ಛಾವಣಿಯಿಂದ 3 ಸಾವಿರ ಹಂಚು ಬಂದಿದ್ದವು. ಅವುಗಳನ್ನು ಮಾರಾಟ ಮಾಡಿದ್ದರಿಂದ 7 ಸಾವಿರ ರೂಪಾಯಿ ಬಂದಿದೆ. ಅದರಲ್ಲಿ 3 ಸಾವಿರ ರೂಪಾಯಿ ಕೊಟ್ಟು ನೀರಿನ ಗಾಡಿ ತಂದಿದ್ದೇವೆ. ಉಳಿದ ಹಣದಲ್ಲಿ ಕಟ್ಟೆ ನಿರ್ಮಾಣ ಮಾಡಿದ್ದೇವೆ. ಆದರೆ, ಈ ಬಗ್ಗೆ ದಾಖಲೆ ಇಟ್ಟುಕೊಂಡಿಲ್ಲ. ಕಲ್ಲು ಮಾರಾಟದ ಬಗ್ಗೆ ನನಗೆ ಗೊತ್ತಿಲ್ಲ. | ಮುದಕನಗೌಡ ಪಾಟೀಲ, ಎಸ್​ಡಿಎಂಸಿ ಮಾಜಿ ಅಧ್ಯಕ್ಷ

ಕೂನಬೇವು ಸರ್ಕಾರಿ ಶಾಲೆಯ ಎಸ್​ಡಿಎಂಸಿ ಸದಸ್ಯರ ನಡುವೆ ಆಗಿರುವ ಸಮಸ್ಯೆ ಕುರಿತು ಪರಿಶೀಲಿಸಲು ಬಿಆರ್​ಪಿಗಳನ್ನು ಕಳುಹಿಸಿದ್ದೇನೆ. ಅವರು ಬಂದು ವರದಿ ಕೊಟ್ಟ ಬಳಿಕ ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು. | ಗುರುಪ್ರಸಾದ, ಬಿಇಒ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net