

ತುಮಕೂರು: ಸರ್ಕಾರಿ ಸೇವೆಯಲ್ಲಿ ಪಾರದರ್ಶಕತೆ ಅತ್ಯಾವಶ್ಯವಾಗಿದ್ದು ಸಾರ್ವಜನಿಕರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿ ನೈತಿಕತೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಜಯಂತಕುಮಾರ್ ಅಭಿಪ್ರಾಯಪಟ್ಟರು.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರವು ರಾಷ್ಟ್ರದ ಅಭಿವೃದ್ಧಿಗೆ ಅತ್ಯಂತ ಗಂಭೀರ ಅಡ್ಡಿ. ಸಣ್ಣ ಮಟ್ಟದ ಲಂಚದಿಂದ ಹಿಡಿದು ಭೂಮಿ, ಗುತ್ತಿಗೆ, ಕಲ್ಯಾಣ ಯೋಜನೆಗಳ ವಹಿವಾಟುಗಳಲ್ಲಿ ನಡೆಯುವ ಅಕ್ರಮಗಳು ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಕುಗ್ಗಿಸುತ್ತವೆ ಎಂದರು.
ಭಷ್ಟಾಚಾರದ ವಿರುದ್ಧ ಕಾನೂನುಗಳು ಕಠಿಣವಾಗಿದ್ದು, ಲಂಚ ಬೇಡುವ ಅಧಿಕಾರಿಯೂ ಅಪರಾಧಿ, ಲಂಚ ಕೊಡುವವರೂ ಸಹ ಅಪರಾಧಿಗಳು ಎಂಬುದನ್ನು ಸ್ಪಫ್ಟಿಪಡಿಸಿದರು. ಸಾಮಾನ್ಯ ಜನರು ದೂರು ನೀಡಲು ಹಿಂಜರಿಯುತ್ತಾರೆ. ಆದರೆ ಸಾಕ್ಷಿಗಳೊಂದಿಗೆ ದೂರು ನೀಡಿದರೆ, ದೂರುದಾರರ ಹೆಸರನ್ನು ರಹಸ್ಯವಾಗಿಡಲು ಕಾನೂನುಬದ್ಧ ರಕ್ಷಣೆಯ ಅವಕಾಶವಿದೆ ಎಂದರು.
ಲೋಕಾಯುಕ್ತ ಪೋಲಿಸ್ ಅಧೀಕ್ಷಕ ಎ.ವಿ.ಲಕ್ಷಿ$್ಮನಾರಾಯಣ ಮಾತನಾಡಿ, ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ಸ್ಪಂದಿಸಿ ಅನಗತ್ಯ ಕಾಲಹರಣ ಮಾಡದೇ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿ- ನೌಕರರು ಸೇವಾ ಮನೋಭಾವದೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಭ್ರಷ್ಟಾಚಾರ ಮುಕ್ತ ಕಚೇರಿಯನ್ನಾಗಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಮಾತನಾಡಿ, ಯಾವುದೇ ಸರ್ಕಾರಿ ಕಚೇರಿಯಲ್ಲಿ ಸೇವೆ ಒದಗಿಸಲು ಲಂಚ ಕೇಳುವುದು, ಅನಗತ್ಯ ವಿಳಂಬ ಮಾಡುವುದು, ಅಧಿಕಾರ ದುರ್ಬಳಕೆ ಕಂಡು ಬಂದರೆ ಜನರು ದೂರು ನೀಡಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಜನರ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗುತ್ತವೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ್ ಮಾತನಾಡಿ, ಸರ್ಕಾರಿ ನೌಕರರು ನೀತಿ-ನಿಯಮಗಳ ಚೌಕಟ್ಟಿನೊಳಗೆ ಕೆಲಸ ಮಾಡಿದರೆ ಜನರ ಬದುಕಿನಲ್ಲಿ ನೈಜ ಬದಲಾವಣೆ ತರಲು ಸಾಧ್ಯವಾಗುತ್ತದೆ. ಜನಸೇವೆಗೆ ಹಣ ಬೇಡುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಮೂರ್ಲನೆಗೊಳಿಸಬೇಕು. ಸಮೃದ್ಧ ಸಮಾಜಕ್ಕಾಗಿ ಭ್ರಷ್ಟಾಚಾರ ವಿರೋಧದ ಜಾಗೃತಿ ಬೇಕು ಎಂದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಯಾಸ್ಮಿನ ಪರ್ವಿನ್ ಲಾಡಖಾನ ಅವರು ಭ್ರಷ್ಟಾಚಾರ ವಿರೋಧಿ ಕಾಯ್ದೆಗಳ ಕುರಿತಾಗಿ ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪುರುಷೋತ್ತಮ ಇದ್ದರು.