ಲೋಪ ಸರಿಪಡಿಸಿ ಇ-ಹರಾಜು ಮುಂದುವರಿಸಿ

Published on

ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ರೇಷ್ಮೆಗೂಡು ಇ&ಹರಾಜು ವ್ಯವಸ್ಥೆಯಲ್ಲಿ ಸಣ್ಣ ಪುಟ್ಟ ಲೋಪ ದೋಷಗಳಿದ್ದು ಸರಿಪಡಿಸಿ ಇ&ಹರಾಜು ಮುಂದುವರಿಸಬೇಕು. ಇ&ಹರಾಜಿನಿಂದ ರೇಷ್ಮೆ ಬೆಳೆಗಾರರು, ರೀಲರುಗಳಿಗೆ ಯಾವುದೇ ರೀತಿಯ ತೊಂದರೆ, ಅನಾನುಕೂಲ ಇಲ್ಲ ಎಂದು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ ತಿಳಿಸಿದರು.

ಇ&ಹರಾಜು ಪದ್ಧತಿಯಲ್ಲಿನ ಸಮಸ್ಯೆಗಳಿಂದ ರೇಷ್ಮೆಗೂಡು ಆವಕವಾಗುತ್ತಿಲ್ಲ. ಹಾಗಾಗಿ ಇ&ಹರಾಜು ಪದ್ಧತಿ ರದ್ದುಪಡಿಸಿ ಎಂದು ಶಾಸಕ ಬಿ.ಎನ್​.ರವಿಕುಮಾರ್​ ಜಿಲ್ಲಾ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಈ ಹಿನ್ನಲೆಯಲ್ಲಿ ನಗರದ ರೇಷ್ಮೆಬಿತ್ತನೆ ಕೋಠಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆಗಾರರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು.

ಇ&ಹರಾಜು ಆರಂಭವಾಗುವುದಕ್ಕೂ ಮೊದಲು ರೇಷ್ಮೆಗೂಡಿನ ಸಾಂಧ್ರತೆಯ ಗುಣಮಟ್ಟ ಪರೀಕ್ಷೆ ಆಗಬೇಕು. ಗುಣಮಟ್ಟದ ಆಧಾರದಲ್ಲಿ ಕನಿಷ್ಟ ಬೆಲೆ ನಿಗದಿಪಡಿಸಿ, ಹರಾಜು ಆದ ಅರ್ಧ ಗಂಟೆಯೊಳಗೆ ರೇಷ್ಮೆಗೂಡು ತೂಕ ಹಾಕಬೇಕು, ತೂಕ ಹಾಕಿದ 2 ಗಂಟೆಯೊಳಗೆ ರೈತನ ಬ್ಯಾಂಕ್​ ಖಾತೆಗೆ ಹಣ ಜಮೆ ಆಗಬೇಕು.ಭಾನುವಾರ, 2, 4ನೇ ಶನಿವಾರ, ಸರ್ಕಾರಿ ರಜೆ ದಿನಗಳಂದು ಹಣ ಖಾತೆಗೆ ಜಮೆ ಆಗಬೇಕು.

ಇದಕ್ಕಾಗಿ ಮಾರುಕಟ್ಟೆ ಆವರಣದಲ್ಲೆ ಪ್ರತ್ಯೇಕ ಬ್ಯಾಂಕ್​ ಶಾಖೆ ತೆರೆಯಬೇಕು. ಇವೆಲ್ಲಾ ಸಮಸ್ಯೆಗಳನ್ನು ನಿವಾರಿಸಿ ಈಗಿರುವ ಇ&ಹರಾಜು ಮುಂದುವರೆಸಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈತರು ಅಭಿಪ್ರಾಯ ಮಂಡಿಸಿದರು.ಮಾರುಕಟ್ಟೆಗಿಂತ ಐದತ್ತು ರೂ. ಹೆಚ್ಚು ಬೆಲೆ ನೀಡುತ್ತೇವೆ ಎಂದು ಕೆಲ ರೀಲರುಗಳು ತೋರುವ ಆಮಿಷದಿಂದ, ಸರ್ಕಾರಕ್ಕೆ ಕಟ್ಟುವ ಕಮೀಷನ್​ ಹಣ ಉಳಿಸಿಕೊಳ್ಳಲು ಕೆಲ ರೈತರು ರೀಲರುಗಳೊಂದಿಗೆ ಒಂದಾಗಿ ಮಾರುಕಟ್ಟೆಯ ಹೊರಗೆ ರೇಷ್ಮೆಗೂಡು ಮಾರಾಟದ ವಹಿವಾಟು ನಡೆಸುತ್ತಿದ್ದಾರೆ. ಈ ಬಗ್ಗೆ ರೈತರು, ರೀಲರುಗಳಲ್ಲಿ ಜಾಗೃತಿ ಮೂಡಿಸಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲೇ ಎಲ್ಲ ರೇಷ್ಮೆಗೂಡು ವಹಿವಾಟು ನಡೆಯುವಂತೆ ಮಾಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net