ಗಣೇಶ ಮೂರ್ತಿ ವಿಸರ್ಜನೆಗೆ ಪಾಲಿಕೆ ಸಿದ್ಧತೆ: ಕಲ್ಯಾಣಿ, ಮೊಬೈಲ್ ಟ್ಯಾಂಕ್ ವ್ಯವಸ್ಥೆ

Ganesha
Published on

ಬೆಂಗಳೂರು: ರಾಜಧಾನಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು 63 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 39 ಕೆರೆ ಅಂಗಳದಲ್ಲಿ ಕಲ್ಯಾಣಿಗಳು ಹಾಗೂ ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ.

ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಸೇರಿ ಇತರೆ ಪ್ರಮುಖ ಕೆರೆ ಹಾಗೂ ಕಲ್ಯಾಣಿಗಳಲ್ಲಿ ಈಗಾಗಲೇ ಗಣೇಶ ಮೂರ್ತಿ ವಿಸರ್ಜಿಸಲು ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ವಸತಿ ಪ್ರದೇಶದಿಂದ ಕೆರೆಗಳು ದೂರ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಚಿಕ್ಕ ಮೂರ್ತಿಗಳ ವಿಸರ್ಜನೆಗೆ ವಾರ್ಡ್‌ಗಳಲ್ಲಿ ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕಗಳ (ಮೊಬೈಲ್ ಟ್ಯಾಂಕ್) ವ್ಯವಸ್ಥೆ ಮಾಡಲಾಗಿದೆ. ಕೆರೆಗಳ ಸುತ್ತಮುತ್ತ, ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ವಿಸರ್ಜನಾ ಕೇಂದ್ರಗಳಲ್ಲೂ ಪಾಳಿಯನುಸಾರ ನುರಿತ ಈಜುಗಾರರು ಸೇರಿ ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ.

ವಿಸರ್ಜನೆಯಿಂದ ಬರುವ ಮಣ್ಣು, ಪೂಜಾ ಹೂಗಳು, ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ವಿಗಂಡಿಸಿ ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ, ಒಣತ್ಯಾಜ್ಯವನ್ನು ಸಂಗ್ರಹಣಾ ಕೇಂದ್ರಗಳಿಗೆ ರವಾನಿಸಬೇಕು. ಸಾರ್ವಜನಿಕರ ಸುರಕ್ಷತೆಗಾಗಿ ಮೂರ್ತಿಗಳ ವಿಸರ್ಜನೆಗೆ ಪ್ರತ್ಯೇಕ ತಂಡ ನೇಮಿಸಬೇಕು. ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ, ಧ್ವನಿವರ್ಧಕ ಸೇರಿ ನುರಿತ ಈಜುಗಾರರ ಒಳಗೊಂಡಂತೆ ಎನ್‌ಡಿಆರ್‌ಎ್ ತಂಡ ಹಾಜರಿರುವಂತೆ ಕ್ರಮವಹಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈಗಾಗಲೇ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ವ್ಯವಸ್ಥೆಯ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೆಚ್ಚಿನ ವಿವರಕ್ಕಾಗಿ ಬಿಬಿಎಂಪಿ ಸಹಾಯವಾಣಿ 1553ಕ್ಕೆ ಕರೆ ಮಾಡಬಹುದು.

ವಲಯ ಮೊಬೈಲ್ ಟ್ಯಾಂಕ್ ಕಲ್ಯಾಣಿಗಳು

ಪೂರ್ವ 88 1

ಪಶ್ಚಿಮ 67 1

ದಕ್ಷಿಣ 46 2

ಮಹದೇವಪುರ 40 14

ದಾಸರಹಳ್ಳಿ 19 1

ಬೊಮ್ಮನಹಳ್ಳಿ 57 4

ಆರ್.ಆರ್.ನಗರ 97 6

ಯಲಹಂಕ 4 10

ಒಟ್ಟು 418 39

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net