ಆರ್ಥಿಕತೆ ಸುಧಾರಣೆಗೆ ಸಿಎಂ ಕಸರತ್ತು: ಅಧಿಕಾರಿಗಳ ಜತೆ ಬಿಎಸ್​ವೈ ಚರ್ಚೆ

BSY
Published on

ಬೆಂಗಳೂರು: ಲಾಕ್​ಡೌನ್​ನಿಂದ ತೀವ್ರ ಕುಸಿತಕ್ಕೊಳಗಾಗಿರುವ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಸುಧಾರಣೆಗೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ವರದಿ ಕೋರಿದ್ದು, ಇವುಗಳ ಆಧಾರದಲ್ಲಿ ದೇಶದ ಆರ್ಥಿಕತೆ ಮೇಲೆತ್ತಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೋದಿ ಸ್ಪಷ್ಟವಾಗಿ ಆರ್ಥಿಕ ಸುಧಾರಣೆ ಬಗ್ಗೆಯೇ ವರದಿ ಕೇಳಿರುವುದರಿಂದ ಬಿಎಸ್​ವೈ ಎರಡು ಗಂಟೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಂಪನ್ಮೂಲ ಕ್ರೋಡೀಕರಣಕ್ಕೆ ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ನೋಂದಣಿ ಆರಂಭಿಸಿದರೆ ಅನುಕೂಲವೆಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಬುಧವಾರದಿಂದ ಬೆಂಗಳೂರಿನಲ್ಲಿ ನೋಂದಣಿ ಆರಂಭವಾಗುತ್ತಿದೆ.

ಮದ್ಯ ಮಾರಾಟಕ್ಕಿಲ್ಲ ಒಪ್ಪಿಗೆ: ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಅನುಮತಿ ನೀಡಬಹುದೆಂಬ ಅಧಿಕಾರಿಗಳ ಸಲಹೆಗೆ ಸಿಎಂ ಒಪ್ಪಿಗೆ ಸೂಚಿಸಿಲ್ಲ. ಮೇ 3ಕ್ಕೆ ಮೊದಲು ಕೇಂದ್ರ ಸರ್ಕಾರದಿಂದ ಯಾವ ಮಾರ್ಗಸೂಚಿ ಬರುವುದೋ ಅದನ್ನು ಗಮನಿಸಿ ತೀರ್ಮಾನ ಮಾಡೋಣವೆಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದರೆಂದು ಹೇಳಲಾಗಿದೆ. ವಾಹನ ನೋಂದಣಿಯನ್ನು ಇಡೀ ರಾಜ್ಯಾದ್ಯಂತ ಆರಂಭಿಸುವ ಬಗ್ಗೆಯೂ ಚರ್ಚೆಯಾಯಿತು. ಅದಕ್ಕೆ ಸಿಎಂ ಸಾರಿಗೆ ಇಲಾಖೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.

ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ವಿನಾಯಿತಿಗಳು ಬೇಕಾಗುತ್ತವೆ. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಗಳು ವಾದಿಸಿದರು. ರೆಡ್​ಜೋನ್​ನಲ್ಲಿಯೂ ಅನುಮತಿ: ರೆಡ್​ಜೋನ್​ನಲ್ಲಿರುವ ಜಿಲ್ಲೆಗಳಲ್ಲಿ ಯಾವ ತಾಲೂಕಿನಲ್ಲಿ ಸೋಂಕು ಇಲ್ಲವೋ ಅಂತಹ ಕಡೆಗಳಲ್ಲಿ ವಾಣಿಜ್ಯ ವಹಿವಾಟು ಆರಂಭಿಸಲು ಕೆಲ ಹಿರಿಯ ಅಧಿಕಾರಿಗಳು ಸಲಹೆ ನೀಡಿದರೆನ್ನಲಾಗಿದೆ. ಆದರೆ ಅದಕ್ಕೆ ಸಭೆಯಲ್ಲಿದ್ದ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ.

ವೇತನಕ್ಕೆ ಇಲ್ಲ ಸಮಸ್ಯೆ: ಸರ್ಕಾರಿ ನೌಕರರ ಏಪ್ರಿಲ್ ತಿಂಗಳ ವೇತನದಲ್ಲಿ ಯಾವುದೇ ಕಡಿತ ಮಾಡದಿರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಬಿದ್ದಿದೆ. ಆರು ಕಂತುಗಳಲ್ಲಿ ಸಂಬಳ ಕೊಡೋಣವೆಂಬ ಆರ್ಥಿಕ ಇಲಾಖೆಯ ಪ್ರಸ್ತಾವನೆಗೆ ಸಿಎಂ ಸಮ್ಮತಿಸಿಲ್ಲ. ತೆರಿಗೆ ಸಂಗ್ರಹ ಶೂನ್ಯವಾಗಿರುವುದರಿಂದ ಈ ರೀತಿಯಲ್ಲಿ ಮಾಡೋಣವೆಂಬುದು ಹಣಕಾಸು ಇಲಾಖೆಯ ಸಲಹೆಯಾಗಿತ್ತು. ಕೇಂದ್ರ ಸರ್ಕಾರ ತೆರಿಗೆ ಪಾಲಿನಲ್ಲಿ 1678 ಕೋಟಿ ರೂ. ಬಿಡುಗಡೆ ಮಾಡಿದೆ. 15 ನೇ ಹಣಕಾಸು ಆಯೋಗದ ವರದಿಯಂತೆ ವಿಶೇಷ ಅನುದಾನ 5495 ಕೋಟಿ ರೂ.ಗಳನ್ನು ನೀಡಲು ಕೇಂದ್ರ ಸರ್ಕಾರ ಒಪ್ಪಿದೆ. ಈ ಹಣವನ್ನಿಟ್ಟುಕೊಂಡು ಸಂಬಳ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದೇಶದ ಪ್ರಕಾರ ಯಾವುದೇ ದುಂದು ವೆಚ್ಚ ಮಾಡದೇ ಕೇವಲ ಸಂಬಳಕ್ಕೆ ಮಾತ್ರ ಹಣ ವೆಚ್ಚ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಲಾಗಿದೆ. ಕೂಲಿ ಕಾರ್ವಿುಕರಿಗೆ ಕೆಲಸ ಕೊಡಲು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು ಹಾಗೂ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಸೀಲ್ಡ್​ಡೌನ್ ಇರುವ ಪ್ರದೇಶ ಹೊರತು ಉಳಿದೆಡೆ ನೋಂದಣಿ ಇಲಾಖೆಗಳು ಕಾರ್ಯ ಆರಂಭಿಸಲಿವೆ. | ಆರ್. ಅಶೋಕ್ ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net