ಅರೆಸ್ಟ್ ಆಗಿದ್ದ ಬೆಳಗಾವಿ ಯೋಧ ಬಿಡುಗಡೆ: ಜೈಲಿನಿಂದ ಕರೆದುಕೊಂಡು ಹೋಗಲು ಬಂದಿದ್ದವರು ಯಾರು?

CRPF Soldier
Published on

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಇಬ್ಬರು ಪೊಲೀಸ್ ಪೇದೆಗಳ ಜತೆ ನಡೆದ ಗಲಾಟೆ, ಹಲ್ಲೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್‌ಗೆ ಚಿಕ್ಕೋಡಿಯ ವಿಚಾರಣಾ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ.

ಸ್ವತಃ ಸಿಆರ್‌ಪಿಎಫ್ ಕಮಾಂಡೋಗಳೇ ಮಂಗಳವಾರ ಬೆಳಗಾವಿಯ ಹಿಂಡಲಗಾ ಜೈಲಿಗೆ ಬಂದು, ಜೈಲರ್‌ಗೆ ಜಾಮೀನಿನ ಪ್ರತಿ ನೀಡಿ ಯೋಧ ಸಚಿನ್‌ನನ್ನು ಗೌರವಪೂರ್ವಕವಾಗಿ ಕರೆದೊಯ್ದರು.

ಈ ವೇಳೆ ವಕೀಲ ವಿ.ಡಿ. ಪಾಟೀಲ ಮಾತನಾಡಿ, ಯೋಧನ ವಿರುದ್ಧ ಐಪಿಸಿ ಸೆಕ್ಷನ್ 353, 323, 504 ಹಾಗೂ ಎಪಿಡೆಮಿಕ್ ಡಿಸೀಜಸ್ ಆಕ್ಟ್ 1987ರ ಸೆಕ್ಷನ್ 3ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸೆಕ್ಷನ್‌ಗಳು ಗಂಭೀರ ಸ್ವರೂಪದ್ದು ಮತ್ತು ಜಾಮೀನು ಸಿಗಲಾರದ ಸ್ವರೂಪದಲ್ಲಿ ಇತ್ತು. ಆದರೂ ಯೋಧ ದೇಶ ಸೇವೆಯಲ್ಲಿ ನಿರತನಾಗಿರುವ ಹಿನ್ನೆಲೆಯನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಿದೆ. ಅಲ್ಲದೆ, ಸಾಕ್ಷಿಗಳನ್ನು ಹೆದರಿಸಬಾರದು; ತನಿಖೆಯಲ್ಲಿ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಷರತ್ತು ವಿಧಿಸಿದೆ ಎಂದು ತಿಳಿಸಿದರು.

ಮಾಸ್ಕ್ ಹಾಕಿಕೊಳ್ಳದ ವಿಚಾರವಾಗಿ ಪೊಲೀಸ್ ಪೇದೆಗಳು ಹಾಗೂ ಯೋಧನ ಮಧ್ಯೆ ಏಪ್ರಿಲ್ 23ರಂದು ಗಲಾಟೆ ನಡೆದು, ಪರಸ್ಪರರು ಹಲ್ಲೆ ಮಾಡಿದ್ದರು. ಬಳಿಕ ಕರ್ತವ್ಯ ನಿರತ ಪೇದೆಗಳ ಮೇಲೆ ಹಲ್ಲೆ ಆರೋಪದಡಿ ಯೋಧನನ್ನು ಬಂಧಿಸಲಾಗಿತ್ತು. ಯೋಧನಿಗೆ ಕೈಕೋಳ ಹಾಕಿ ಠಾಣೆಯಲ್ಲಿ ಕೂರಿಸಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ತನಿಖೆ ಆರಂಭ:

ಈ ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ. ತನಿಖೆ ಮಾಡುವಂತೆ ಗೃಹ ಇಲಾಖೆಯಿಂದ ಆದೇಶ ಬಂದಿದ್ದು ಮಂಗಳವಾರದಿಂದ ತನಿಖೆ ಆರಂಭಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net