ದೀಪ ಹಚ್ಚೋಣ, ಕರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡೋಣ!

Vij 1
Published on

ಜನತಾ ಕರ್ಫ್ಯೂದಂದು ಕೆಲ ಜನರು ಗುಂಪಾಗಿ ಗಂಟೆ, ಜಾಗಟೆ ಬಾರಿಸಿದ್ದರು. ಇಂಥ ಪ್ರಮಾದ ಮತ್ತೆ ಮರುಕಳಿಸ ಬಾರದು. ಕರೊನಾ ಅಪಾಯವನ್ನು ಮರೆಯಬಾರದೆಂಬುದು ನಮ್ಮ ಆಶಯ.

ದೀಪ ಹಚ್ಚುವುದರಿಂದ ಕರೊನಾ ತೊಲಗಿಸಬಹುದೇ? ಬಡವರಿಗೆ ಇದರಿಂದೇನು ಪ್ರಯೋಜನ ಎಂಬ ಹತ್ತಾರು ಟೀಕೆ-ಟಿಪ್ಪಣಿ, ವ್ಯಂಗ್ಯದ ಮೊನಚು ಮಾತುಗಳು ಕೆಲವೆಡೆಯಿಂದ ಹೊಮ್ಮುತ್ತಿರುವಾಗಲೇ, ಮತ್ತೊಂದೆಡೆ ಕೋಟ್ಯಂತರ ಜನರು ಭಾವನಾತ್ಮಕವಾಗಿ ಒಂದಾಗಿದ್ದಾರೆ. ಕೆಲ ಸಂದರ್ಭಗಳಲ್ಲಿ ಬರೀ ತರ್ಕಗಳಿಗೆ ಜೋತುಬಿದ್ದರೆ ಸಾಕಾಗುವುದಿಲ್ಲ. ಆಪತ್ತು ಎಷ್ಟೇ ದೊಡ್ಡದಿದ್ದರೂ, ಅದನ್ನು ಗೆಲ್ಲುತ್ತೇವೆ ಎಂಬ ಆತ್ಮಬಲ ಜಾಗೃತಗೊಳಿಸಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಇದೇ ವಿಶ್ವಾಸ ಹುಟ್ಟಿಸಲು ಮುಂದಾಗಿದ್ದಾರೆ. ಆ ನಿಟ್ಟಿನ ಪ್ರಯತ್ನ ಇಂದಿನ ದೀಪಾರಾಧನೆ.

ಬೆಳಕಿನೆಡೆಗೆ ಸಾಗುವ ಆಶಯ

ಭಾರತೀಯ ಸಂಸ್ಕೃತಿಗೂ ಬೆಳಕಿಗೂ ಅವಿನಾಭಾವ ನಂಟು. ನಮ್ಮೆಲ್ಲ ಉತ್ಸವ, ಹಬ್ಬಹರಿದಿನಗಳು ಕತ್ತಲೆ ಕಳೆಯುವ, ಬೆಳಕನ್ನು ಹರಡುವ ಆಶಯೕ ಹೊಂದಿವೆ. ದೀಪಾವಳಿ ಹೊತ್ತಲ್ಲಿ ಹಚ್ಚುವ ಹಣತೆ ಬರೀ ನಮ್ಮ ಮನೆಗಳನ್ನು ಬೆಳಗಬೇಕು ಎಂದಲ್ಲ, ಮನದಲ್ಲಿನ ಅಂಧಕಾರ, ಕಲ್ಮಶ, ವಿಷಾದಗಳನ್ನೆಲ್ಲ ದೂರ ಮಾಡಿ ಅಂತಃಕರಣದ ಲೋಕ ವಿಶಾಲವಾಗ ಬೇಕು ಎಂದು. ಅದಕ್ಕೆಂದೆ, ಕಾರ್ತಿಕ ಮಾಸದಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ದೀಪೋತ್ಸವ ವನ್ನು ನಡೆಸುವ ಮೂಲಕ ‘ಬೆಳಕಿನೆಡೆಗೆ ಸಾಗೋಣ’ ಎಂಬ ಸಂದೇಶ ನೀಡಲಾಗುತ್ತದೆ.

ಏಕತೆಯ ಮಂತ್ರ: ಏಪ್ರಿಲ್ ಮೂರರಂದು ಬೆಳಗ್ಗೆ 9 ಗಂಟೆಗೆ ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ ಮೋದಿ-‘ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ಬಲ್ಬ್​ಗಳನ್ನು ಬಂದ್ ಮಾಡಿ 9 ನಿಮಿಷಗಳ ಕಾಲ ದೀಪ ಅಥವಾ ಮೇಣದಬತ್ತಿ ಬೆಳಗಿಸಿ’ ಎಂದಿದ್ದಾರೆ. ಕರೊನಾ ಸೋಂಕಿನ ದಿಗ್ಬಂಧನದ ಈ ಹೊತ್ತಲ್ಲಿ ಜನರು ಸೋಂಕಿಗಿಂತ, ಒಂಟಿತನ, ಮುಂದೇನು ಎಂಬ ಆತಂಕದಿಂದ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ. ಈ ಹೊತ್ತಲ್ಲಿ ಯಾರೂ ಏಕಾಂಗಿಯಲ್ಲ, ಸಮಸ್ಯೆ ವಿರುದ್ಧ ಹೋರಾಡಲು ದೇಶದ 130 ಕೋಟಿ ಜನರು ಒಗ್ಗಟ್ಟಾಗಿದ್ದಾರೆ, ಈ ಏಕತೆಯೇ ನಮ್ಮನ್ನು ಕಾಪಾಡಲಿದೆ ಎಂಬ ಬಹುದೊಡ್ಡ ಸಂದೇಶವನ್ನು ದೀಪಗಳನ್ನು ಬೆಳಗಿಸುವ ಇಡೀ ದೇಶ ಪ್ರಬಲವಾಗಿ ಸಾರಲಿದೆ. ವೈದ್ಯರುಗಳು, ಇತರ ಸಂಬಂಧಿತ ಇಲಾಖೆಗಳು ಶಕ್ತಿಮೀರಿ ಶ್ರಮಿಸುತ್ತಿವೆ. ಇವುಗಳ ಜತೆಗೆ ದೇಶದ ಜನರಿಗೆ ಭಾವನಾತ್ಮಕ ಬೆಂಬಲ ನೀಡಬೇಕಿದೆ.

ಆಧ್ಯಾತ್ಮಿಕ ಆಯಾಮ

ಏನೋ ಕಷ್ಟದ ಸನ್ನಿವೇಶ ಎದುರಾಗಿ ಬಿಟ್ಟರೆ ಮನೆಯ ಹಿರಿಯರು ಮೊದಲು ನೀಡುವ ಸಲಹೆಯೆಂದರೆ, ‘ದೇವರ ಎದುರು ದೀಪ ಹಚ್ಚಿ, ಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿ’ ಎಂದು. ಬೆಳಕಿಗೆ ಆಧ್ಯಾತ್ಮಿಕ ಆಯಾಮವೂ ಇದೆ, ಸಾಮಾಜಿಕ ಮಹತ್ವವೂ ಇದೆ. ಜ್ಯೋತಿಷಶಾಸ್ತ್ರದ ನಂಬಿಕೆಯೂ ಇದೆ. ಅದಕ್ಕಿಂತ ಹೆಚ್ಚಾಗಿ ಚಿಂತೆ ಕಳೆಯುವ, ಭಾವಗಳನ್ನು ಒಂದು ಮಾಡುವ ಚೈತನ್ಯವಿದೆ.

ಏನು ಮಾಡಬೇಕು

  • ಮನೆ ಬಳಕೆ ಲೈಟ್​ಗಳನ್ನು ಮಾತ್ರ ಆರಿಸಿ
  • ದೀಪ, ಮೇಣದ ಬತ್ತಿ, ಟಾರ್ಚ್, ಲಾಟೀನು ಬಳಸಿ
  • ಮನೆಯ ಹೊಸ್ತಿಲು ಒಳಗೆ ಅಥವಾ ಬಾಲ್ಕನಿಯಲ್ಲಿ ನಿಂತು ಬೆಳಕು ಹರಿಸಿ
  • ಬೀದಿದೀಪಗಳು, ಆಸ್ಪತ್ರೆ, ಪೊಲೀಸ್ ಠಾಣೆಗಳು, ಪೌರಾಡಳಿತ ಸೇವೆ ಸಹಿತ ಸಾರ್ವಜನಿಕ ಸುರಕ್ಷತೆ ಹಾಗೂ ಅಗತ್ಯ ಸೇವೆಗಳಿಗೆ ವಿದ್ಯುತ್ ಪೂರೈಕೆ ಇರಲಿ

ಏನು ಮಾಡಬಾರದು

  • ಕೈಗೆ ಸ್ಯಾನಿಟೈಸರ್ ಹಚ್ಚಿಕೊಂಡು ದೀಪ ಬೆಳಗಿಸಬಾರದು
  • ಗೃಹ ಬಳಕೆಯ ರೆಫ್ರಿಜರೇಟರ್, ಫ್ಯಾನ್, ಎಸಿ, ಕಂಪ್ಯೂಟರ್, ಟಿವಿ ಬಂದ್ ಮಾಡುವ ಅಗತ್ಯವಿಲ್ಲ
  • ಗುಂಪು ಗುಂಪಾಗಿ ದೀಪ ಬೆಳಗಬಾರದು,

ಸಾಮಾಜಿಕ ಅಂತರ ಮರೆಯಬಾರದು

ಕೋವಿಡ್-19 ಎಂಬ ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ನಾವು ನಡೆಸುತ್ತಿರುವ ಯುದ್ಧದಲ್ಲಿ ಇದು ಬೆಳಕಿನ ರಣಕಹಳೆ. ದೇಶದ 130 ಕೋಟಿ ಪ್ರಜೆಗಳು ಈ ಹೋರಾಟದಲ್ಲಿ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಸಮಯ ಬಂದಿದೆ. ನಮ್ಮ ನಮ್ಮ ಮನೆ ಬಾಗಿಲಲ್ಲಿ, ಬಾಲ್ಕನಿಗಳಲ್ಲಿ, ತಾರಸಿಯ ಮೇಲೆ ಬೆಳಕನ್ನು ಹೊತ್ತಿಸಿ ಒಗ್ಗಟ್ಟು ಸಾರೋಣ. ಸಾಮಾಜಿಕ ಅಂತರದ ಮೂಲಮಂತ್ರವನ್ನು ಮರೆಯುವುದು ಬೇಡ.

| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

ಭಾನುವಾರದಂದು ರಾತ್ರಿ ಒಂಬತ್ತು ಗಂಟೆಗೆ

ಒಂಬತ್ತು ನಿಮಿಷ ಜ್ಯೋತಿ ಹಚ್ಚಿ ಶುಭ ಹಾರೈಸಿ ಮನಸ್ಸಿನ ಕತ್ತಲೆ ಜತೆಗೆ ದೇಶದಿಂದ ಈ ಕ್ರೂರವಾದಂತಹ ಕರೊನಾ ರಾಕ್ಷಸನನ್ನು ಓಡಿಸಿ. ನಾವು ಕೂಡಾ ಧರ್ಮಸ್ಥಳ ದೇವಸ್ಥಾನದಲ್ಲಿ ಜ್ಯೋತಿ ಹಚ್ಚುತ್ತೇವೆ. ಇದರ ಫಲವಾಗಿ ನಮ್ಮ ನಾಡಿಗೆ, ರಾಷ್ಟ್ರಕ್ಕೆ, ವಿಶ್ವಕ್ಕೆ ಶುಭವಾಗಲಿ ಎಂದು ಹಾರೈಸುತ್ತೇನೆ.

| ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net