ಆರ್ಡರ್ ಮಾಡಿದ್ದು 1570, ಬಂದಿದ್ದು 30!: ಇದು ವೆಂಟಿಲೇಟರ್ ಕಥೆ-ವ್ಯಥೆ

Ventilator
Published on

ಬೆಂಗಳೂರು: ಕರೊನಾ ಆತಂಕದಲ್ಲಿ ಅಂತೂ ಸರ್ಕಾರಕ್ಕೆ 30 ಹೊಸ ವೆಂಟಿಲೇಟರ್​ಗಳು ಬಂದಿವೆ. ಸತತ ಪ್ರಯತ್ನದ ಬಳಿಕ ಮೊದಲ ಕಂತಿನಲ್ಲಿ 30 ವೆಂಟಿಲೇಟರ್ ಸರಬರಾಜು ಮಾಡಲಾಗಿದ್ದು, 2ನೇ ಹಂತದಲ್ಲಿ 100 ವೆಂಟಿಲೇಟರ್​ಗಳನ್ನು ನೀಡುವ ಭರವಸೆ ನೀಡಲಾಗಿದೆ. ಇದೇ ಸ್ಥಿತಿಯಲ್ಲಿ ಸರಬರಾಜಾದರೆ, ತಿಂಗಳು ಮುಗಿದರೂ 300 ವೆಂಟಿಲೇಟರ್​ಗಳು ಸಿಗುವುದು ಕಷ್ಟ.

1570 ವೆಂಟಿಲೇಟರ್​ಗೆ ಆರ್ಡರ್: ಸರ್ಕಾರ 1,570 ವೆಂಟಿಲೇಟರ್​ಗಳಿಗೆ ಆರ್ಡರ್ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಸಕಾಲದಲ್ಲಿ ವೆಂಟಿಲೇಟರ್​ಗಳು ಸಿಗುತ್ತಿಲ್ಲ. ಈ ಮೊದಲೇ ಆರ್ಡರ್ ಮಾಡಿದ್ದರೆ ಇಷ್ಟೊತ್ತಿಗೆ 500ಕ್ಕೂ ಹೆಚ್ಚು ವೆಂಟಿಲೇಟರ್ ಲಭಿಸಿರುತ್ತಿತ್ತು. ಸರ್ಕಾರದ ಮಟ್ಟದಲ್ಲಿ ತೀರ್ವನವಾಗಿ ವರ್ಕ್ ಆರ್ಡರ್ ಕೊಡುವ ಹೊತ್ತಿಗೆ ಬೇರೆ ಕಡೆಯಿಂದಲೂ ಬೇಡಿಕೆ ಬಂದಿದ್ದರಿಂದ ನಿಧಾನವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವೆಂಟಿಲೇಟರ್ ಖರೀದಿಸಬೇಕು ಎಂದು ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ತೀರ್ವನವಾದರೂ, ಅದನ್ನು ಹೇಗೆ ಯಾವ ಇಲಾಖೆಯಿಂದ ಖರೀದಿಸಬೇಕು ಎನ್ನುವ ಗೊಂದಲ ಬಗೆಹರಿಯಲು ದಿನಗಳು ಕಳೆದವು. ಆರೋಗ್ಯ ಇಲಾಖೆಯೋ? ವೈದ್ಯಕೀಯ ಇಲಾಖೆಯೋ? ಎಂಬ ತಿಕ್ಕಾಟದ ಬಳಿಕ ಅಂತಿಮವಾಗಿ ಆರೋಗ್ಯ ಇಲಾಖೆಯಿಂದಲೇ ಆರ್ಡರ್ ಮಾಡಲಾಗಿದೆ.

ಮುಗಿಯದ ಗೊಂದಲ: ಕರೊನಾ ಸಂಕಷ್ಟ ನಿಭಾಯಿಸಲು ಅತಿ ಜರೂರಾಗಿ ಬೇಕಾಗಿರುವ ವೆಂಟಿಲೇಟರ್​ಗಳ ಸಮಸ್ಯೆ ಸದ್ಯಕ್ಕೆ ಮುಗಿಯುವಂತಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಡುವೆ ಉಂಟಾದ ಗೊಂದಲಗಳನ್ನು ನಿಭಾಯಿಸಲು ಸಿಎಂ ಸರ್ಕಸ್ ಮಾಡಬೇಕಾಯಿತು. ಸುರೇಶ್​ಕುಮಾರ್ ಅವರಿಗೆ ಕರೊನಾ ಮಾಹಿತಿ ನೀಡುವ ಜವಾಬ್ದಾರಿ ನೀಡಿದ ಬಳಿಕ ಸಮಸ್ಯೆ ಬಗೆಹರಿದಿದೆ. ಆದರೂ ಆಂತರಿಕ ಮುಸುಕಿನ ಗುದ್ದಾಟಗಳು ಇನ್ನೂ ಮುಗಿದಿಲ್ಲ. ಈ ಸಂದರ್ಭದಲ್ಲಿ ಸಂಘಟಿತವಾಗಿ ನಡೆಯಬೇಕಾಗಿದ್ದ ಪ್ರಯತ್ನಗಳಿಗೆ ಹೊಂದಾಣಿಕೆ ಕಾರಣಕ್ಕೆ ಆಗಿಂದಾಗ್ಗೆ ಸಮಸ್ಯೆಗಳು ಎದುರಾಗುತ್ತಲೇ ಇವೆ.

ಸದ್ಯಕ್ಕೆ 2,234 ವೆಂಟಿಲೇಟರ್ ಲಭ್ಯ

ಸರ್ಕಾರಿ ಆಸ್ಪತ್ರೆಗಳ 734 ಹಾಗೂ ಖಾಸಗಿ ಆಸ್ಪತ್ರೆಗಳ 1,500 ಸೇರಿ ಒಟ್ಟು 2,234 ವೆಂಟಿಲೇಟರ್​ಗಳು ಲಭ್ಯ ಇವೆ. ಏನೇ ಸಮಸ್ಯೆಗಳಿದ್ದರೂ ಕನಿಷ್ಠ 2 ಸಾವಿರ ವೆಂಟಿಲೇಟರ್ ತಕ್ಷಣದ ಸೇವೆಗೆ ಲಭ್ಯ ಇವೆ ಎನ್ನುವುದು ಅಧಿಕಾರಿಗಳ ಸ್ಪಷ್ಟನೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿರುವ ಎಲ್ಲ ವೆಂಟಿಲೇಟರ್​ಗಳು ಒಮ್ಮೆಗೇ ಸೇವೆಗೆ ಲಭಿಸುವುದು ಕಷ್ಟ. ಆದರೂ ಸರ್ಕಾರ ಖಾಸಗಿ ಆಸ್ಪತ್ರೆಗಳ ವೆಂಟಿಲೇಟರ್ ನಂಬಿರುವುದು ಚರ್ಚೆಗೆ ಗ್ರಾಸವಾಗಿದೆ.

| ಶಿವಾನಂದ ತಗಡೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net