

ಬೆಂಗಳೂರು: ಕಿಲ್ಲರ್ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ಪತ್ತೆಯಾಗಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ದಿನಾಂಕ 29/03/20ರ ಸಂಜೆ 5 ಗಂಟೆಯಿಂದ 30/03/20ರ ಬೆಳಗ್ಗೆ 8 ಗಂಟೆಯವರೆಗೆ 5 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 88ಕ್ಕೇರಿದೆ. ಪತ್ತೆಯಾದ 5 ಪ್ರಕರಣಗಳು ಮೈಸೂರು ಜಿಲ್ಲೆ ನಂಜನಗೂಡು ನಿವಾಸಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಂಜನಗೂಡು ಶಾಸಕ ಹರ್ಷವರ್ಧನ್ ಮಾತನಾಡಿ, ನಂಜನಗೂಡಿನಲ್ಲಿ 4500 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಸೋಂಕಿತರ ಕುಟುಂಬಸ್ಥರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಜುಬಿಲಿಯೆಂಟ್ ಜನರಿಕ್ ಕಾರ್ಖಾನೆಯ ಕೆಲ ಕಾರ್ಮಿಕರಲ್ಲೂ ಕರೊನಾ ಪಾಸಿಟಿವ್ ಆಗಿದೆ. 14 ಕುಟುಂಬಗಳನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿ, ಎಲ್ಲರನ್ನೂ ಈಗಾಗಲೇ ಪ್ರತ್ಯೇಕವಾಗಿ ಇಡಲಾಗಿದೆ ಎಂದು ತಿಳಿಸಿದ್ದಾರೆ.