

ಬೆಂಗಳೂರು: ಇಟಲಿ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಕೋವಿಡ್-19 ಹಿನ್ನಲೆಯಲ್ಲಿ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆ ತರಲು ರಾಜ್ಯ ಸರಕಾರ, ಕೇಂದ್ರ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದೆ.
ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಈ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆ ಬುಧವಾರ ಮಾತನಾಡಿದ್ದಾರೆ.
ಕೇಂದ್ರ ಸರಕಾರವು ಈಗಾಗಲೇ ವಿವಿಧ ದೇಶಗಳಲ್ಲಿರುವ ಭಾರತಿಯರನ್ನು ಏರ್ ಲಿಫ್ಟ್ ಮಾಡುತ್ತಿರುವ ಬೆನ್ನಲ್ಲಿಯೇ ರಾಜ್ಯ ಸರಕಾರವೂ ಕನ್ನಡಿಗರನ್ನು ವಾಪಸ್ ಕರೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕೂಡ ಉಳಿದವರ ಜತೆ ವಾಪಸ್ ಕರೆ ತರಲಾಗುವುದು. ಭಾರತದಿಂದಲೇ ವಿವಿಧ ದೇಶಗಳಿಗೆ ತಜ್ಞ ವೈದ್ಯರನ್ನು ಕಳಿಸಿ ಅಲ್ಲಿಯೇ ಪ್ರತಿಯೊಬ್ಬರನ್ನು ತೀವ್ರವಾಗಿ ತಪಾಸಣೆಗೆ ಒಳಪಡಿಸಿ ವಾಪಸ್ ಕರೆತರಲಾಗುವುದು ಎಂದು ಕೇಂದ್ರವು ರಾಜ್ಯಕ್ಕೆ ಭರವಸೆ ನೀಡಿದೆ.
ಕಚೇರಿ ಬಂದ್ ಇಲ್ಲ
ಸರ್ಕಾರಿ ಸೇರಿದಂತೆ ಯಾವುದೇ ಕಚೇರಿಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶ ನೀಡಿಲ್ಲ ಎಂದು ಅಶ್ವತ್ಥ ನಾರಾಯಣ ಸ್ಪಷ್ಟ ಪಡಿಸಿದರು. ಚಿಕನ್ ತಿಂದರೆ ಕೋವಿಡ್ ಬರುತ್ತದೆ ಎನ್ನುವುದು ಸುಳ್ಳು. ಈ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.