

ಬೆಂಗಳೂರು: ಮಹಾಮಾರಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅತಿ ಹೆಚ್ಚು ಕರೊನಾ ಬಾಧಿತವಾಗಿರುವ ರಾಷ್ಟ್ರದ 170 ಜಿಲ್ಲೆಗಳ ಪೈಕಿ ಕರ್ನಾಟಕದ 8 ಜಿಲ್ಲೆಗಳು ಕೂಡ ಸೇರಿವೆ.
ರಾಜ್ಯದ ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ ಮತ್ತು ಧಾರವಾಡ ಕರೊನಾ ಹಾಟ್ಸ್ಟಾಟ್ ಎಂದು ಕೇಂದ್ರ ಸರ್ಕಾರ ಗುರುತಿಸಿದ್ದು, ಈ ಜಿಲ್ಲೆಗಳಲ್ಲಿ 2ನೇ ಹಂತದ ಲಾಕ್ಡೌನ್ ಹೆಚ್ಚು ಪರಿಣಾಮಕಾರಿಯಾಗಿರಲಿದೆ.
ಏಪ್ರಿಲ್ 14ರಂದು ಮೊದಲನೇ ಹಂತದ ಲಾಕ್ಡೌನ್ ಮುಗಿದಿದ್ದು, ನಿನ್ನೆಯಿಂದಲೇ 2ನೇ ಹಂತದ ಲಾಕ್ಡೌನ್ ಆರಂಭವಾಗಿದ್ದು, ಮೇ 3ರವರೆಗೆ ಇಡೀ ರಾಷ್ಟ್ರ ದಿಗ್ಬಂಧನಲ್ಲಿ ಇರಲಿದೆ. ಎರಡನೇ ಹಂತದ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಒಂದಿಷ್ಟು ವಿನಾಯಿತಿಗಳನ್ನು ನೀಡಿದೆ. ಸರ್ಕಾರಿ ವಾಹನಗಳು ಹಾಗೂ ಸಾರ್ವಜನಿಕ ಸ್ಥಳಗಳ ತೆರೆಯುವುದನ್ನು ಸರ್ಕಾರ ನಿಷೇಧಿಸಿದೆ. ಏಪ್ರಿಲ್ 20ರಿಂದ ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ಮಾಡಿಕೊಟ್ಟಿದೆ.
ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆ 11 ಸಾವಿರ ದಾಟಿದ್ದು, 300ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 250ಕ್ಕೂ ಹೆಚ್ಚಿದ್ದು, ಈವರೆಗೂ 12 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)