ಅಸಹಾಯಕತೆಯಲ್ಲಿ ಕರೊನಾ ಸೇನಾನಿಗಳು!

16byd2
Published on

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಇಷ್ಟು ದಿನ ಬೇರೆಯವರ ಕುಟುಂಬಗಳನ್ನು ಕರೊನಾ ಮಹಾಮಾರಿಯಿಂದ ರಕ್ಷಿಸಲು ಹೋರಾಡಿ ತಾವೇ ಕ್ವಾರಂಟೈನ್​ನಲ್ಲಿರುವ ಕರೊನಾ ಸೇನಾನಿಗಳ ಕುಟುಂಬಗಳೇ ಇಂದು ನಿರ್ಲಕ್ಷ್ಯ್ಕೊಳಗಾಗಿವೆ!

ಪೊಲೀಸ್ ಕ್ವಾರ್ಟರ್ಸ್​ನಲ್ಲಿರುವ ಹೊಸ ಕಟ್ಟಡದಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪ್ರತ್ಯೇಕವಾಗಿ ಕ್ವಾರಂಟೈನ್​ನಲ್ಲಿಡಲಾಗಿದೆ. ಆದರೆ, ಪಟ್ಟಣ ಪಂಚಾಯಿತಿಯಿಂದ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಗೆ ಹಾಲು, ಹಣ್ಣು, ತರಕಾರಿ, ಶುದ್ಧ ನೀರು ಪೂರೈಕೆ ಇಲ್ಲದಾಗಿದೆ. ಹೀಗಾಗಿ ಚಿಕ್ಕ ಮಕ್ಕಳು ಹಾಲು, ಹಣ್ಣು ಇಲ್ಲದೇ ಪರಿತಪಿಸುವಂತಾಗಿದೆ.

ಕ್ವಾರಂಟೈನ್​ನಲ್ಲಿರುವ ಸಿಬ್ಬಂದಿಗೆ ಪಕ್ಕದಲ್ಲಿನ ತಮ್ಮ ಮನೆಗಳಿಂದಲೇ ಊಟ ಪೂರೈಕೆಯಾಗುತ್ತಿದೆ. ಆದರೆ, ಅದಕ್ಕೆ ಅಗತ್ಯ ಪದಾರ್ಥಗಳನ್ನು ಯಾರೂ ತಂದು ಕೊಡುವವರಿಲ್ಲ. ಪೊಲೀಸ್ ಠಾಣೆ ಸುತ್ತಲೂ ಕಂಟೇನ್ಮೆಂಟ್ ಪ್ರದೇಶವೆಂದು ಘೊಷಿಸಿದೆ. ಹೀಗಾಗಿ ಹೊರಗಿನಿಂದ ಅಲ್ಲಿಗೆ ಯಾರೂ ಬರುವಹಾಗಿಲ್ಲ. ಹಾಗೆಯೇ ಅಲ್ಲಿಂದ ಯಾರೂ ಹೊರಗೆ ಹೋಗುವಹಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳು ಅಗತ್ಯ ವಸ್ತುಗಳನ್ನು ತರಿಸಿಕೊಳ್ಳುವುದಾದರೂ ಹೇಗೆ?

ಕ್ವಾರಂಟೈನ್​ನಲ್ಲಿರುವುದರಿಂದ ನಮ್ಮ ಕುಟುಂಬಸ್ಥರಿಗೆ ಸಹಾಯ ಮಾಡಲಾಗದೇ ಅಸಹಾಯಕತೆಯಲ್ಲಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿಯೊಬ್ಬರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡಿದ್ದಾರೆ.

ಕರೊನಾ ವಿರುದ್ಧ ಜನರನ್ನು ರಕ್ಷಿಸಲು ಹೋರಾಡಿದ ಪೊಲೀಸರನ್ನೇ ಇಂದು ಪಟ್ಟಣ ಪಂಚಾಯಿತಿ ನಿರ್ಲಕ್ಷಿ್ಯರುವುದು ವಿಪರ್ಯಾಸ.

ರಾಸಾಯನಿಕ ದ್ರಾವಣ ಸಿಂಪಡಣೆ: ಕಾನ್ಸ್​ಟೇಬಲ್​ಗೆ ಕರೊನಾ ದೃಢಪಟ್ಟಿರುವುದರಿಂದ ಪಟ್ಟಣದ ಪೊಲೀಸ್ ಠಾಣೆ ಹಾಗೂ ತಹಸೀಲ್ದಾರ್ ಕಾರ್ಯಾಲಯಕ್ಕೆ ಮಂಗಳವಾರ ರಾಸಾಯನಿಕ ದ್ರಾವಣ ಸಿಂಪಡಿಸಲಾಯಿತು.

ಪುರಸಭೆ ಸಿಬ್ಬಂದಿ ಆಗಮಿಸಿ ಪೊಲೀಸ್ ಠಾಣೆಯ ಎಲ್ಲ ಕೊಠಡಿ ಹಾಗೂ ತಹಸೀಲ್ದಾರ್ ಕಾರ್ಯಾಲಯಕ್ಕೆ ರಾಸಾಯನಿಕ ದ್ರಾವಣ ಸಿಂಪಡಿಸಿದರು. ಮುಖ್ಯಾಧಿಕಾರಿ ವಿ.ಎಂ. ಪೂಜಾರ ಇದ್ದರು.

ಸೋಂಕಿತ ಕಾನ್ಸ್​ಟೇಬಲ್​ನ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿನ ಮನೆಯ ಸದಸ್ಯರು ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟ 21 ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಗ್ರಾಮದ ಪ್ರತಿ ಮನೆಮನೆಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಜನರ ಜ್ವರ, ಕೆಮ್ಮು, ನೆಗಡಿ ಸೇರಿ ಇತ್ಯಾದಿ ಆರೋಗ್ಯ ತೊಂದರೆಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಐದು ಜನ ಕಾರ್ಯಕರ್ತೆಯರು ಪಿಪಿಇ ಕಿಟ್ ಧರಿಸಿ ಕರ್ತವ್ಯದಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net