

ಬೆಂಗಳೂರು: ಮುಂದಿನ ಫೆಬ್ರವರಿ-ಮಾರ್ಚ್ ಬಂದರೆ ಇಲ್ಲಿಗೆ ಕರೊನಾ ಹಾವಳಿ ಇಟ್ಟು ಹೆಚ್ಚೂಕಡಿಮೆ ಒಂದು ವರ್ಷ. ಈ ನಡುವೆ ಕರೊನಾ ಸೋಂಕಿನ ಪ್ರಕರಣಗಳು ತಗ್ಗಿರುವುದರಿಂದ ಎಷ್ಟೋ ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಜನಜೀವನ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ..
ಹೌದು.. ಹಾಗಂತ ಎಲ್ಲರೂ ನಿರ್ಲಕ್ಷಿಸಿದರೆ ಮತ್ತೆ ಸೋಂಕಿನ ಹಾವಳಿ ಉಂಟಾಗುವ ಸಾಧ್ಯತೆಗಳಿವೆ. ಇಂಥದ್ದೊಂದು ಎಚ್ಚರಿಕೆಯನ್ನು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ನೀಡಿದ್ದಾರೆ. ಲಯನ್ಸ್ ಕ್ಲಬ್ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕೋದ್ಯಮ ದಿನಾಚರಣೆಯಲ್ಲಿ ಪಾಲ್ಗೊಂಡ ಅವರು ಈ ವಿಷಯ ತಿಳಿಸಿದರು.
ರಾಜ್ಯ ಮತ್ತು ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಕಡಿಮೆ ಇದೆ. ಇದರಿಂದ ಯಾರೂ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಸೋಂಕಿನ ಎರಡನೇ ಅಲೆ ಸಾಧ್ಯತೆ ಇದೆ. ಹೀಗಾಗಿ ಸರ್ಕಾರದ ಜತೆ ಸಾರ್ವಜನಿಕರು ಸೋಂಕಿನ ವಿರುದ್ಧ ಹೋರಾಡಬೇಕಿದೆ. ಮಾಸ್ಕ್, ವ್ಯಕ್ತಿಗತ ಅಂತರ ಸೇರಿ ಇನ್ನಿತರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.