ಕರೊನಾ ಹಗರಣ ತನಿಖೆ ಖಚಿತ - ಸಚಿವ ಸತೀಶ ಜಾರಕಿಹೊಳಿ

satish jarakiholi
Published on

ಬೆಳಗಾವಿ: ಮಾಜಿ ಸಚಿವ ಕೆ.ಸುಧಾಕರ್ ಕಾಂಗ್ರೆಸ್ ಬರುವುದು, ಬಿಡುವುದು ಅವರಿಗೆ ಬಿಟ್ಟದ್ದು. ಯಾರೇ ಕಾಂಗ್ರೆಸ್‌ಗೆ ಬಂದರೂ, ಬಾರದಿದ್ದರೂ ಕರೊನಾ ಹಗರಣದ ತನಿಖೆ ಆಗಲೇಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಯಾವುದೇ ತಂತ್ರಗಾರಿಕೆ ಮಾಡಿಲ್ಲ. ಒಬ್ಬರಷ್ಟೇ ಅಲ್ಲ, ಬಹಳ ಜನರ ಮೇಲೆ ಆರೋಪವಿದೆ. ಆ ಬಗ್ಗೆಯೂ ತನಿಖೆ ಆಗಬೇಕಿದೆ ಎಂದರು.

ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಆರೋಪ ಮಾಡಿದವರೇ ನಾವು. ಈಗ ನಮ್ಮ ಬಳಿಯೇ ಅಧಿಕಾರವಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ಮಾಡಿಸುತ್ತೇವೆ. ಕರೊನಾ ಸಂದರ್ಭದಲ್ಲಿ 10 ರೂ.ಮೌಲ್ಯದ ವಸ್ತುವನ್ನು 100ರೂ.ಗೆ, 100 ರೂ. ವಸ್ತುವನ್ನು 1 ಸಾವಿರ ರೂ.ಗೆ ಖರೀದಿಸಿದ್ದಾರೆ. ಆ ವೇಳೆ ಮಿತಿಮೀರಿ ಅವ್ಯವಹಾರವಾಗಿದೆ. ಸಂಬಂಧಿತ ಮಾಜಿ ಸಚಿವರು ಹಾಗೂ ಅಧಿಕಾರಿಗಳು ಅದರಲ್ಲಿ ಭಾಗಿಯಾಗಿರುತ್ತಾರೆ. ಹಾಗಾಗಿ, ತನಿಖೆ ಮಾಡಿದರೆ ಸತ್ಯ ಹೊರಬರಲಿದೆ ಎಂದು ಸತೀಶ ಪ್ರತಿಕ್ರಿಯಿಸಿದರು.

ಲೋಕಸಭೆ ಚುನಾವಣೆಗೆ ಜಾರಕಿಹೊಳಿ ಕುಟುಂಬದಿಂದ ಯಾರಾದರೂ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಇಲ್ಲ. ಮುಂದೆ ನೋಡೋಣ. ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಅವರೆಲ್ಲರೂ ಬಹಿರಂಗವಾಗಿ ಹೇಳಬೇಕು. ಆಮೇಲೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಚರ್ಚಿಸುತ್ತೇವೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ರೀತಿ ಘಟನೆಗಳಿಗೆ ಬೆಳಗಾವಿ ಮತ್ತು ರಾಜ್ಯದಲ್ಲಿ ಅವಕಾಶ ಕೊಡುವುದಿಲ್ಲ. ಇಂತಹ ಪ್ರಕರಣ ಗಮನಕ್ಕೆ ಬಂದರೆ, ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಕುರಿತು ಪ್ರತಿಕ್ರಿಯಿಸಿದ ಸತೀಶ, ಸರ್ಕಾರ ಅವರನ್ನು ದೆಹಲಿ ಪ್ರತಿನಿಧಿಯಾಗಿ ನೇಮಿಸಿ ಜವಾಬ್ದಾರಿ ಕೊಟ್ಟಿದೆ. ಹಾಗಾಗಿ ಬಾಕಿ ಇರುವ ರಾಜ್ಯ ಸರ್ಕಾರದ ವಿವಿಧ ಕಾಮಗಾರಿಗಳ ಕಡತ ವಿಲೇವಾರಿಗೊಳಿಸಲು ವಿವಿಧ ಸಚಿವರನ್ನು ಭೇಟಿಯಾಗುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net