ಕರೊನಾ ರೂಲ್ಸ್​ ಬ್ರೇಕ್​ ಮಾಡಿ ಮದುವೆ; ಅಧಿಕಾರಿಗಳನ್ನು ನೋಡುತ್ತಿದ್ದಂತೆ ವಧುವನ್ನು ಬಿಟ್ಟು ಕಾಲ್ಕಿತ್ತ ವರ!

kaduru
Published on

ಕಡೂರು: ಕರೊನಾ ಸೋಂಕು ಹರಡುತ್ತಿದೆ. ಸೋಂಕಿನ ನಿಯಂತ್ರಣಕ್ಕೆಂದು ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಈ ಸಮಯದಲ್ಲಿ ಯಾರೂ ಕಾರ್ಯಕ್ರಮಗಳನ್ನು ಮಾಡಬೇಡಿ ಎಂದು ಸರ್ಕಾರ ಮನವಿ ಮಾಡಿದೆ. ಈಗಾಗಲೇ ನಿಶ್ಚಯವಾಗಿರುವ ಮದುವೆಗಳಿಗೂ ಕೆಲವೇ ಕೆಲವು ಜನರು ಸೇರಲು ಜಿಲ್ಲಾಡಳಿತ ಅನುಮತಿ ನೀಡುತ್ತಿದೆ. ಹಾಗಿದ್ದರೂ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿ ಮದುವೆ ನಡೆಸಿರುವ ಘಟನೆ ಕಡೂರಿನಲ್ಲಿ ನಡೆದಿದೆ.

ತಾಲೂಕಿನ ಕರಿಕಲ್ಲಳಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ವಧು ವರನ ಮನೆಯವರು ಕೇವಲ 10 ಜನರು ಸೇರಿ ಮದುವೆ ಮಾಡುವುದಾಗಿ ಜೋಡಿಹಳ್ಳಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದರು. ಆದರೆ ಮದುವೆ ದಿನದಂದು ಆ ನಿಯಮವನ್ನು ಬ್ರೇಕ್​ ಮಾಡಿರುವುದು ಕಂಡುಬಂದಿದೆ. ಮದುವೆ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜನರಿಗಾಗಿ ಕುರ್ಚಿಗಳನ್ನು ಹಾಕಿರುವುದು ಕಂಡುಬಂದಿದೆ. ಸಾಕಷ್ಟು ಮಂದಿ ಒಟ್ಟಿಗೆ ಪಂಕ್ತಿಯಲ್ಲಿ ಕುಳಿತು ಊಟ ಮಾಡಿ ಎದ್ದಿರುವುದೂ ತಿಳಿದುಬಂದಿದೆ.

ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ಜರುಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಜೋಡಿಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿ ನೆರೆದಿದ್ದವರನ್ನು ಬೈದು ಮನೆಗೆ ಕಳುಹಿಸಿದ್ದಾರೆ. ಅಧಿಕಾರಿಗಳನ್ನು ಕಾಣುತ್ತಿದ್ದಂತೆಯೇ ವೇದಿಕೆ ಮೇಲಿದ್ದ ವರ ಕೂಡ, ವಧುವನ್ನು ಅಲ್ಲಿಯೇ ಬಿಟ್ಟು ಫೋಟೋಗ್ರಾಫರ್​ಗಳ ಜತೆ ಕೆಳಗಿಳಿದು ಹೋಗಿದ್ದಾನೆ. ನಂತರ ವಧು ಕೂಡ ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net